ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ರಾಜ್ಯದಲ್ಲಿ ನಮ್ಮ ಪಕ್ಷ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಇನ್ನೊಂದೆಡೆ, ನಾನು ರಾಜೀನಾಮೆ ನೀಡಿಲ್ಲ ಅಂತಾ ಸಿಎಂ ಸುಖ್ವಿಂದರ್ ಸಿಂಗ್ ಸುಖು ಸ್ಪಷ್ಟಪಡಿಸಿದ್ದಾರೆ.
'ರಾಜೀನಾಮೆ ಸುದ್ದಿ ಸುಳ್ಳು': ಸಿಎಂ ಸುಖ್ವಿಂದರ್ ಸಿಂಗ್ ಸುಖ್ ಪ್ರತಿಕ್ರಿಯಿಸಿ, "ನಾನೊಬ್ಬ ಹೋರಾಟಗಾರ. ಒಳ್ಳೆಯ ಕುಟುಂಬದಿಂದ ಬಂದವನು. ನಾವು ಈ ಯುದ್ಧವನ್ನು ಗೆಲ್ಲುತ್ತೇವೆ. ವಿಧಾನಸಭೆಯಲ್ಲೂ ಬಹುಮತ ಸಾಬೀತುಪಡಿಸುತ್ತೇವೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕೆಲವು ಶಾಸಕರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದರು.
ಇದೇ ವೇಳೆ ತಾವು ರಾಜೀನಾಮೆ ನೀಡಿಲ್ಲ ಎಂದು ಹೇಳಿದ್ದಾರೆ. ಬಜೆಟ್ ಅಧಿವೇಶನದಲ್ಲಿ ನಮ್ಮ ಸರ್ಕಾರ ಬಹುಮತ ಸಾಬೀತುಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಸುಖು, ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದರು.
ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ: ಹಿಮಾಚಲ ಪ್ರದೇಶದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿ ಹಣ ದುರುಪಯೋಗಪಡಿಸಿಕೊಂಡು ತನಿಖಾ ಸಂಸ್ಥೆಗಳ ಮೂಲಕ ಜನಾದೇಶವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನರು ತಮ್ಮಿಚ್ಛೆಯ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದಾರೆ. ಹಿಮಾಚಲದಲ್ಲಿ ಸರ್ಕಾರ ರಚಿಸಲು ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಆದರೆ ಬಿಜೆಪಿ ಹಣ ದುರ್ಬಳಕೆ ಮಾಡಿಕೊಂಡು ತನಿಖಾ ಸಂಸ್ಥೆಗಳ ಮೂಲಕ ಜನರ ಹಕ್ಕು ಹತ್ತಿಕ್ಕಲು ಯತ್ನಿಸುತ್ತಿದೆ. 25 ಶಾಸಕರನ್ನು ಹೊಂದಿರುವ ಪಕ್ಷವು 43 ಶಾಸಕರ ಬಹುಮತಕ್ಕೆ ಸವಾಲು ಹಾಕುತ್ತಿದೆ. ಬಿಜೆಪಿಯ ಧೋರಣೆ ಅನೈತಿಕ ಮತ್ತು ಸಂವಿಧಾನ ವಿರೋಧಿಯಾಗಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಡ್ಡ ಮತದಾನ ದುರದೃಷ್ಟಕರ- ಜೈರಾಮ್ ರಮೇಶ್: ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿರುವುದು ದುರದೃಷ್ಟಕರ. ಪ್ರಸ್ತುತ ಸರಕಾರವನ್ನು ಉಳಿಸುವುದು ತಮ್ಮ ಪಕ್ಷದ ಮೊದಲ ಆದ್ಯತೆ. ಅಡ್ಡ ಮತದಾನದ ಕುರಿತು ನಮ್ಮ ವೀಕ್ಷಕರು ಕೇಂದ್ರ ನಾಯಕತ್ವಕ್ಕೆ ವರದಿ ಸಲ್ಲಿಸಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅನುರಾಗ್ ಠಾಕೂರ್ ಮತ್ತು ಜೈರಾಮ್ ಠಾಕೂರ್ ಅವರನ್ನು ತಿರಸ್ಕರಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
ಇದನ್ನೂ ಓದಿ: ಹಿಮಾಚಲಪ್ರದೇಶದಲ್ಲಿ ರಾಜಕೀಯ ತಲ್ಲಣ: ಸರ್ಕಾರ ಉಳಿಸಲು ಸಿಎಂ ಸುಖು ರಾಜೀನಾಮೆ?