ಇಡುಕ್ಕಿ(ಕೇರಳ): ಶಾಲಾ ವಿದ್ಯಾರ್ಥಿಗಳ ಗುಂಪೊಂದು ಆಕಸ್ಮಿಕವಾಗಿ ಅಬಕಾರಿ ಕಚೇರಿಗೆ ಪ್ರವೇಶಿಸಿ ಗಾಂಜಾ ತುಂಬಿದ ಬೀಡಿಗೆ ಬೆಂಕಿ ಹಚ್ಚಿಕೊಳ್ಳಲು ಬೆಂಕಿಪೊಟ್ಟಣ ನೀಡುವಂತೆ ವಿನಂತಿಸಿದ ವಿಚಿತ್ರ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.
ತ್ರಿಶೂರ್ನ ಅನುದಾನಿತ ಶಾಲೆಯೊಂದರ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಪ್ರವಾಸಕ್ಕಾಗಿ ಇಡುಕ್ಕಿಗೆ ಬಂದಿದ್ದರು. ಆದರೆ ಈ ವಿದ್ಯಾರ್ಥಿಗಳ ಪೈಕಿ ಕೆಲವರು ಗೊತ್ತಿಲ್ಲದೆ ಅಲ್ಲಿನ ಅಬಕಾರಿ ಕಚೇರಿಗೇ ಹೋಗಿ ಬೆಂಕಿ ಪೊಟ್ಟಣ ಕೇಳಿದ ಘಟನೆ ಜಿಲ್ಲೆಯ ಆದಿಮಾಲಿಯಲ್ಲಿ ಸೋಮವಾರ ನಡೆದಿದೆ. ವಿದ್ಯಾರ್ಥಿಗಳು ಸ್ಥಳೀಯ ಅಬಕಾರಿ ಕಚೇರಿಯನ್ನು ಯಾವುದೋ ವರ್ಕ್ಶಾಪ್ ಇರಬಹುದು ಎಂದು ಭಾವಿಸಿ ಒಳಗೆ ಪ್ರವೇಶಿಸಿದ್ದರಂತೆ.
ಗಾಂಜಾ ಸೇದಲು ಬೆಂಕಿಪೊಟ್ಟಣ ಕೇಳುತ್ತಿದ್ದಾರೆ ಎಂಬ ಸುಳಿವು ಸಿಕ್ಕ ತಕ್ಷಣ ತಕ್ಷಣವೇ ಅಬಕಾರಿ ಅಧಿಕಾರಿಗಳು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಗಾಂಜಾ, ಹಶಿಶ್ ಆಯಿಲ್ ಮತ್ತು ಇತರ ನಿಷೇಧಿತ ವಸ್ತುಗಳನ್ನು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಿಷೇಧಿತ ವಸ್ತುಗಳ ಸಾಗಾಟದ ಆರೋಪದ ಮೇಲೆ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೋಟೆಲ್ನಲ್ಲಿ ಊಟ ಮಾಡಿದ ನಂತರ ಕೆಲ ವಿದ್ಯಾರ್ಥಿಗಳು ಗಾಂಜಾ ಸೇದಲು ಬಯಸಿದ್ದಾರೆ. ಆದರೆ ಅವರ ಬಳಿ ಬೆಂಕಿ ಪೊಟ್ಟಣ ಇರಲಿಲ್ಲ. ಅಲ್ಲೇ ಹತ್ತಿರದಲ್ಲೇ ಇದ್ದ ಅಬಕಾರಿ ಕಚೇರಿಯ ಹಿಂಭಾಗವನ್ನು ನೋಡಿ ಅದೊಂದು ವರ್ಕ್ಶಾಪ್ ಇರಬಹುದೆಂದು ಭಾವಿಸಿ ಬೆಂಕಿ ಪೊಟ್ಟಣ ಕೇಳಿದ್ದಾರೆ ಎಂದು ಹಿರಿಯ ಅಬಕಾರಿ ಅಧಿಕಾರಿಯೊಬ್ಬರು ಹೇಳಿದರು.
"ಆದರೆ ಕಚೇರಿಯಲ್ಲಿ ಅಧಿಕಾರಿಗಳನ್ನು ನೋಡುತ್ತಿದ್ದಂತೆಯೇ ಗಾಬರಿಯಾದ ಅವರು ಹೊರಗೆ ಓಡಿ ಹೋದರು. ಆದರೆ ಅವರೆಲ್ಲರೂ ಸಿಕ್ಕಿಬಿದ್ದರು. ನಂತರ ತಪಾಸಣೆ ನಡೆಸಿದಾಗ ಅವರ ಬಳಿ ನಿಷೇಧಿತ ಮಾದಕ ವಸ್ತುಗಳು ಸಿಕ್ಕಿವೆ" ಎಂದು ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು. ಮಾದಕವಸ್ತುಗಳು ಸಿಕ್ಕ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ ಸ್ಟೆನ್ಸಸ್ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಎಲ್ಲ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಲಾಯಿತು.
"ಇಬ್ಬರನ್ನು ಬಿಟ್ಟು ಉಳಿದ ವಿದ್ಯಾರ್ಥಿಗಳನ್ನು ಅವರ ಶಿಕ್ಷಕರೊಂದಿಗೆ ವಾಪಸ್ ಕಳುಹಿಸಲಾಯಿತು. ಆದರೆ ಆ ಇಬ್ಬರು ವಿದ್ಯಾರ್ಥಿಗಳ ವಿಷಯದಲ್ಲಿ, ಪೋಷಕರನ್ನು ಕರೆಸಿ ಅವರಿಗೆ ಮಾಹಿತಿ ನೀಡಿದ ನಂತರ ಕಳುಹಿಸಲಾಯಿತು" ಎಂದು ಹಿರಿಯ ಅಬಕಾರಿ ಅಧಿಕಾರಿ ಹೇಳಿದರು.
ಇದನ್ನೂ ಓದಿ: ವಕ್ಫ್ ಜೆಪಿಸಿ ಸಭೆಯಲ್ಲಿ ಕೋಲಾಹಲ: ಬಾಟಲಿ ಒಡೆದು ಚೂರು ಎಸೆದಾಡಿದ ಟಿಎಂಸಿ ಸಂಸದ