ಸಿಲ್ಚಾರ್ (ಅಸ್ಸಾಂ) : ಅಕ್ರಮ ಮಾದಕ ದ್ರವ್ಯ ವ್ಯಾಪಾರದ ವಿರುದ್ಧ ಅಸ್ಸಾಂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯಪಡೆಯು ಗುರುವಾರ ಸಿಲ್ಚಾರ್ - ಮಿಜೋರಾಂ ರಾಷ್ಟ್ರೀಯ ಹೆದ್ದಾರಿಯ ಕ್ಯಾಚಾರ್‌ನ ಶಿಲ್ದುಬಿಯಲ್ಲಿ ಸುಮಾರು 21 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಚಾರ್ ಪೊಲೀಸರೊಂದಿಗೆ ಎಸ್‌ಟಿಎಫ್ ತಂಡ ಕಾರ್ಯಾಚರಣೆ ನಡೆಸಿ ಮಿಜೋರಾಂನಿಂದ ಬರುತ್ತಿದ್ದ ವಾಹನವನ್ನು ತಪಾಸಣೆ ನಡೆಸಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಅಸ್ಸಾಂ ಪೊಲೀಸರ ಎಸ್‌ಟಿಎಫ್ ಗುರುವಾರ ರಾತ್ರಿ ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಯೀದ್‌ಪುರ ಪ್ರದೇಶದ ಬಳಿ ನೋಂದಣಿ ಸಂಖ್ಯೆ MZ-01-7204 ಹೊಂದಿರುವ ವಾಹನವನ್ನು ತಡೆದು ತಪಾಸಣೆ ನಡೆಸಿತ್ತು. ಈ ವೇಳೆ, ಕಾರಿನಲ್ಲಿ ಸುಮಾರು 21 ಕೆಜಿ ಹೆರಾಯಿನ್ ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಬ್ಬ ಕಳ್ಳಸಾಗಣೆದಾರನನ್ನು ಕೂಡ ಬಂಧಿಸಲಾಗಿದೆ. ಪೂರೈಕೆದಾರರು ಮಿಜೋರಾಂ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
ವಶಪಡಿಸಿಕೊಂಡ ಹೆರಾಯಿನ್‌ನ ಮಾರುಕಟ್ಟೆ ಮೌಲ್ಯ ಸುಮಾರು 200 ಕೋಟಿ ರೂಪಾಯಿ ಎಂದು ಪೊಲೀಸರು ಅಂದಾಜಿಸಿದ್ದಾರೆ. ಎಸ್‌ಟಿಎಫ್ ತಂಡದ ಮುಖ್ಯಸ್ಥ ಮತ್ತು ಅಸ್ಸಾಂ ಪೊಲೀಸ್ ಉಪ ಮಹಾನಿರೀಕ್ಷಕ ಪಾರ್ಥ ಸಾರಥಿ ಮಹಾಂತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮಿಜೋರಾಂನಿಂದ ಹಲವಾರು ಪ್ಯಾಕೆಟ್‌ಗಳು ಸೇರಿದಂತೆ 105 ಸೋಪ್ ಕೇಸ್‌ಗಳಲ್ಲಿ ಹೆರಾಯಿನ್ ತರಲಾಗಿತ್ತು. ಸದ್ಯ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಓದಿ: ತಲವಾರ್ ಹಿಡಿದು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಸೇಡಂ ಪೊಲೀಸರಿಂದ ಬರ್ತಡೇ ಬಾಯ್ ಬಂಧನ - A man arrested