ಅಜಂಗಢ (ಉತ್ತರಪ್ರದೇಶ): I.N.D.I.A ಕೂಟದ ಸಹಪಕ್ಷವಾದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕಾರ್ಯಕ್ರಮದಲ್ಲಿ ಭಾರೀ ಗದ್ದಲ ಉಂಟಾಗಿದೆ. ಪಕ್ಷದ ಕಾರ್ಯಕರ್ತರೇ ಅಖಿಲೇಶ್ ಎದುರುಗಡೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಅಜಂಗಢ್ ಜಿಲ್ಲೆಯ ಲಾಲ್ಗಂಜ್ ಲೋಕಸಭಾ ವ್ಯಾಪ್ತಿಯ ಸರಯ್ಮೀರ್‌ನಲ್ಲಿ ಇಂದು ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಅಖಿಲೇಶ್ ಯಾದವ್ ಅವರು ವೇದಿಕೆಗೆ ಬರುತ್ತಿದ್ದಾಗ, ಪಕ್ಷದ ಕಾರ್ಯಕರ್ತರು ಅವರನ್ನು ಬರಮಾಡಿಕೊಳ್ಳುವಾಗ ತಿಕ್ಕಾಟ ಉಂಟಾಗಿದೆ. ಇದರಿಂದ ಸಭೆಯಲ್ಲಿದ್ದ ಕುರ್ಚಿ, ಕಲ್ಲು, ಇಟ್ಟಿಗೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಇದರಿಂದ ಕಾರ್ಯಕ್ರಮದಲ್ಲಿ ಭಾರೀ ಗೊಂದಲ ಉಂಟಾಯಿತು. ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವೇದಿಕೆ ಮೇಲೆಯೇ ಮೂಕ ಪ್ರೇಕ್ಷಕರಂತೆ ಕುಳಿತಿರಬೇಕಾಯಿತು.
ಪೊಲೀಸ್ ಲಾಠಿ ಪ್ರಹಾರ: ಎಷ್ಟೇ ಮನವಿ ಮಾಡಿದರೂ, ಕಾರ್ಯಕರ್ತರು ಬಡಿದಾಡಿಕೊಳ್ಳುವುದನ್ನು ನಿಲ್ಲಿಸಿದಿದ್ದಾಗ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿದ್ದ ಜನರು ದಿಕ್ಕೆಟ್ಟು ಓಟಕ್ಕಿತ್ತರು. ಕೆಲ ಸಮಯದ ನಂತರ ಸಾರ್ವಜನಿಕ ಸಭೆ ಆರಂಭವಾಯಿತು.
ಮೇ 25 ರಂದು ನಡೆಯುವ 6ನೇ ಹಂತದ ಚುನಾವಣೆಯಲ್ಲಿ ಅಜಂಗಢ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಅಖಿಲೇಶ್ ಯಾದವ್ ಅವರ ಮೊದಲ ಸಾರ್ವಜನಿಕ ಸಭೆ ಇದಾಗಿದೆ. ಆದರೆ, ಇಂದಿನ ಸಭೆಯಲ್ಲಿ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿರುವುದು ನಾಯಕರಿಗೆ ಮುಜುಗರ ತರಿಸಿದೆ. ಇದಲ್ಲದೇ, ಎಸ್‌ಪಿ ಕಾರ್ಯಕರ್ತರ ನಡವಳಿಕೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಪೊಲೀಸರ ಸಾಕಷ್ಟು ಪ್ರಯತ್ನದ ನಂತರ ಸಾರ್ವಜನಿಕ ಸಭೆ ಆರಂಭವಾಗಿದ್ದು, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಭಾಷಣ ಮಾಡಿದರು.
ಪೊಲೀಸರ ಪ್ರಕಾರ, ವೇದಿಕೆಯ ಮೇಲೇರಲು ಕಾರ್ಯಕರ್ತರ ಮಧ್ಯೆ ಪೈಪೋಟಿಯಿಂದಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ತೊಂದರೆ ಉಂಟಾಯಿತು. ಹೀಗಾಗಿ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ.