ಗುವಾಹಟಿ: ಇಂದಿನ ಬ್ಯುಸಿ ಜೀವನದಲ್ಲಿ ಅನೇಕ ಮಂದಿಗೆ ತಂದೆ - ತಾಯಿಯೊಂದಿಗೆ, ಅತ್ತೆ- ಮಾವಂದಿರ ಜೊತೆಗೆ ಸಮಯ ಕಳೆಯುವುದಿಲ್ಲ. ವಯಸ್ಸಾದವರಿಗೆ ಈ ವಿಚಾರವೂ ಹೆಚ್ಚು ನೋವುದಾಯಕವೂ ಆಗಿದೆ. ಈ ಎಲ್ಲ ಅಂಶವನ್ನು ಗಮನದಲ್ಲಿರಿಸಿಕೊಂಡು ಇದೀಗ ಅಸ್ಸಾಂ ಸರ್ಕಾರ ಹೊಸ ನಿರ್ಧಾರ ಪ್ರಕಟಿಸಿದೆ. ಅಂದೆಂದರೆ ರಾಜ್ಯದ ಸರ್ಕಾರಿ ಉದ್ಯೋಗಿಗಳು ತಮ್ಮ ಪೋಷಕರು ಅಥವಾ ಅತ್ತೆ- ಮಾವಂದಿರೊಂದಿಗೆ ಸಮಯ ಕಳೆಯಲು ಎಂದೇ ಎರಡು ದಿನದ ವಿಶೇಷ ರಜೆ ನೀಡಿದೆ. ಮಾತೃ- ಪಿತೃ ವಂದನಾದ ಉಪಕ್ರಮದ ಭಾಗವಾಗಿ ಈ ರಜೆ ಘೋಷಣೆ ಮಾಡಲಾಗಿದೆ.
ರಾಜ್ಯದ ಸರ್ಕಾರಿ ಉದ್ಯೋಗಿಗಳು ನವೆಂಬರ್ನಲ್ಲಿ ಈ ಎರಡು ದಿನದ ವಿಶೇಷ ರಜೆ ಸೌಲಭ್ಯ ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಆದೇಶಿಸಿದೆ. ಅಲ್ಲದೇ, ಈ ರಜೆಯನ್ನು ವೈಯಕ್ತಿಕ ಸಂಭ್ರಮಕ್ಕೆ ಬಳಕೆ ಮಾಡುವಂತಿಲ್ಲ. ಅಲ್ಲದೇ, ಪೋಷಕರು ಮತ್ತು ಅತ್ತೆ- ಮಾವ (ಗಂಡ/ಹೆಂಡತಿ ಪೋಷಕರು) ಇಲ್ಲದವರಿಗೆ ಈ ರಜೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಕುರಿತು ಅಸ್ಸಾಂ ಸಿಎಂ ಕಚೇರಿಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. 'ಸಿಎಂ ಡಾ ಹಿಮಂತ ಬಿಸ್ವ ಶರ್ಮಾ ಅವರ ನಾಯಕತ್ವದ ಅಸ್ಸಾಂ ಸರ್ಕಾರದಲ್ಲಿ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಪೋಷಕರು ಮತ್ತು ಅತ್ತೆ - ಮಾವಂದಿರ ಜೊತೆ ಸಮಯ ಕಳೆಯಲು 2024ರ ನವೆಂಬರ್ 6 ಮತ್ತು 8 ರಂದು ವಿಶೇಷ ಸಾಮಾನ್ಯ ರಜೆ ಘೋಷಿಸಲಾಗಿದೆ' ಎಂದು ತಿಳಿಸಲಾಗಿದೆ.
ಈ ರಜೆಯನ್ನು ಕಡ್ಡಾಯವಾಗಿ ವಯಸ್ಸಾದ ಪೋಷಕರ ಜೊತೆಯಲ್ಲಿಯೇ ಕಳೆಯಬೇಕಿದೆ. ಈ ಮೂಲಕ ಅವರಿಗೆ ಗೌರವ, ಆರೈಕೆ ಸಲ್ಲಿಸಬೇಕಿದೆ. ಅಪ್ಪಿತಪ್ಪಿಯು ಈ ರಜೆಯನ್ನು ವೈಯಕ್ತಿಕ ಬಳಕೆ ಮಾಡುವಂತಿಲ್ಲ ಎಂದು ಒತ್ತಿ ಹೇಳಲಾಗಿದೆ.
ಈ ರಜೆಯು ಸುದೀರ್ಘ ರಜೆ ನಡುವೆ ಬರಲಿದೆ. ನವೆಂಬರ್ 7ರ ಛತ್ ಪೂಜೆ ಹಿನ್ನೆಲೆ ಸಾರ್ವಜನಿಕ ರಜಾ ದಿನವಿದೆ. ನವೆಂಬರ್ 9 ಎರಡನೇ ಶನಿವಾರ, ನವೆಂಬರ್ 10 ಭಾನುವಾರ ಆಗಿದೆ ಎಂದು ಸಿಎಂಒ ತಿಳಿಸಿದೆ
ಪೋಷಕರ ಅಗತ್ಯ ಸೇವೆಗಳಲ್ಲಿರುವ ಉದ್ಯೋಗಿಗಳು ಈ ರಜೆಯನ್ನು ಹಂತ ಹಂತವಾಗಿ ಪಡೆಯಬಹುದು. 2021ರಲ್ಲಿ ಸಿಎಂ ಆಗಿ ಅಧಿಕಾರ ಪಡೆದ ಬಳಿಕ ಮೊದಲ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಈ ರಜೆ ಕುರಿತು ಸಿಎಂ ಹಿಮಂತ ಬಿಸ್ವ ಶರ್ಮಾ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: ತ್ರಿಪುರಾದ 828 ವಿದ್ಯಾರ್ಥಿಗಳಲ್ಲಿ ಎಚ್ಐವಿ ಸೋಂಕು?: ಸ್ಪಷ್ಟನೆ ನೀಡಿದ ಸರ್ಕಾರ