ಲಖನೌ (ಉತ್ತರಪ್ರದೇಶ): ಚುನಾವಣೆಯಲ್ಲಿ ಬಿಜೆಪಿಯ ಸೋಲನ್ನು ತಪ್ಪಿಸಲು ಉತ್ತರಪ್ರದೇಶ, ಕೇರಳ, ಪಂಜಾಬ್ನ ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಬದಲಿಸಿದೆ ಎಂದು ಸಮಾಜವಾದಿ ಪಕ್ಷ ಮತ್ತು ಆಪ್ ಆರೋಪಿಸಿವೆ. ಇದನ್ನು ಆಯೋಗ ನಿರಾಕರಿಸಿದ್ದು, ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಈ ಬಗ್ಗೆ ಕಿಡಿಕಾರಿದ್ದು, ಉತ್ತರ ಪ್ರದೇಶದ ಒಂಬತ್ತು ಸ್ಥಾನಗಳ ಉಪ ಚುನಾವಣೆಗೆ ನವೆಂಬರ್ 13 ರಂದು ಮತದಾನ ನಿಗದಿ ಮಾಡಲಾಗಿತ್ತು. ಆದರೆ, ಇದನ್ನು ಚುನಾವಣಾ ಆಯೋಗವು ಸೋಮವಾರ ನವೆಂಬರ್ 20 ಕ್ಕೆ ಮರು ನಿಗದಿಪಡಿಸಿದೆ. ಇದು ಚುನಾವಣೆಯಲ್ಲಿ ಸೋಲು ತಪ್ಪಿಸಿಕೊಳ್ಳಲು ಬಿಜೆಪಿಯು ಹೆಣೆದಿರುವ ಹಳೆಯ ತಂತ್ರವಾಗಿದೆ ಎಂದಿದ್ದಾರೆ.
ಚುನಾವಣೆಯನ್ನು ಎಷ್ಟು ದೂರ ಮುಂದೂಡುವಿರೋ ಅಷ್ಟು ಹೀನಾಯವಾಗಿ ಬಿಜೆಪಿ ಸೋಲು ಅನುಭವಿಸಲಿದೆ. ಕೆಲಸ ಅರಸಿ ವಿವಿಧೆಡೆ ಹೋಗಿದ್ದ ಜನರು ದೀಪಾವಳಿ, ಛತ್ ಹಬ್ಬಕ್ಕೆ ಊರಿಗೆ ವಾಪಸ್ ಬಂದಿದ್ದಾರೆ. ಈಗ ಚುನಾವಣೆ ನಡೆದರೆ, ನಿರುದ್ಯೋಗದ ವಿರುದ್ಧ ಜನರು ಬಿಜೆಪಿಯನ್ನು ಸೋಲಿಸಿದ್ದಾರೆ. ಇದಕ್ಕೆ ಹೆದರಿ ಮತದಾನ ದಿನಾಂಕವನ್ನು ಮುಂದೂಡಿಸಲಾಗಿದೆ ಎಂದು ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಎಸ್‌ಪಿ ಪರ ಆಪ್ ಪ್ರಚಾರ: ಚುನಾವಣೆ ದಿನಾಂಕ ಮುಂದೂಡಿದ್ದನ್ನು ಆಮ್ ಆದ್ಮಿ ಪಕ್ಷವೂ ಟೀಕಿಸಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಅನುಕೂಲ ಮಾಡಿಕೊಡಲು ಉದ್ದೇಶಪೂರ್ವಕವಾಗಿ ಉತ್ತರ ಪ್ರದೇಶ ಉಪಚುನಾವಣೆಯ ದಿನಾಂಕಗಳನ್ನು ಮುಂದೂಡಲಾಗಿದೆ ಎಂದು ಆ ಪಕ್ಷದ ನಾಯಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಇದು ಚುನಾವಣಾ ಆಯೋಗದ ಬದ್ಧತೆಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಸೋಮವಾರ ಇಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ತಮ್ಮ ಪಕ್ಷವು ರಾಜ್ಯದಲ್ಲಿ ಎಸ್‌ಪಿ ಪರ ಪ್ರಚಾರ ನಡೆಸಲಿದೆ ಎಂದರು.
ಚುನಾವಣಾ ಆಯೋಗ ಹೇಳೋದೇನು?: ಮುಂದಿನ ವಾರದಲ್ಲಿ ಸಾಲು ಸಾಲು ಹಬ್ಬಗಳಿವೆ. ಜನರು ಸಂಭ್ರಮದಲ್ಲಿ ತೊಡಗುವುದರಿಂದ ಮತದಾನ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜಕೀಯ ಪಕ್ಷಗಳ ಮನವಿ ಮೇರೆಗೆ ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ರಾಷ್ಟ್ರೀಯ ಲೋಕದಳ ಸೇರಿದಂತೆ ಕೆಲವು ಸಾಮಾಜಿಕ ಸಂಘಟನೆಗಳು ಚುನಾವಣೆಯನ್ನು ಮುಂದೂಡಲು ಕೋರಿವೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಚಂದ್ರಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರಪ್ರದೇಶ ಒಂಬತ್ತು ವಿಧಾನಸಭಾ ಕ್ಷೇತ್ರಗಳಾದ ಕತೇಹಾರಿ (ಅಂಬೇಡ್ಕರ್ ನಗರ), ಕರ್ಹಾಲ್ (ಮೈನ್‌ಪುರಿ), ಮೀರಾಪುರ (ಮುಜಾಫರ್‌ನಗರ), ಗಾಜಿಯಾಬಾದ್, ಮಜವಾನ್ (ಮಿರ್ಜಾಪುರ್), ಸಿಶಾಮೌ (ಕಾನ್ಪುರ್ ಸಿಟಿ), ಖೈರ್ (ಅಲಿಗಢ), ಫುಲ್ಪುರ್ (ಪ್ರಯಾಗರಾಜ್) ಮತ್ತು ಕುಂದರ್ಕಿ (ಮೊರಾದಾಬಾದ್) ಕ್ಷೇತ್ರಗಳಿಗೆ ಈ ಮೊದಲು ನವೆಂಬರ್ 13 ರಂದು ಮತದಾನ ಘೋಷಿಸಲಾಗಿತ್ತು. ಇದೀಗ ನವೆಂಬರ್ 20 ಕ್ಕೆ ಮುಂದೂಡಲಾಗಿದೆ. ನವೆಂಬರ್ 23 ರಂದು ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಯುಪಿ, ಕೇರಳ - ಪಂಜಾಬ್ ಉಪಚುನಾವಣೆ ದಿನಾಂಕ ಬದಲಾವಣೆ