ಹೈದರಾಬಾದ್ : ಎಂ ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್‌ಎಸ್‌ಆರ್‌ಎಫ್)ನ ಇತ್ತೀಚಿನ ಅಧ್ಯಯನವು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳವು ಸಿರಿಧಾನ್ಯ ಕೃಷಿಯ ಕೇಂದ್ರಗಳಾಗಿ ಬೆಳೆಯುತ್ತಿರುವ ಬಗ್ಗೆ ಉಲ್ಲೇಖಿಸಿದೆ.
ಸಿರಿಧಾನ್ಯ ಕೃಷಿಯ ವಿಸ್ತರಣೆಗೆ ಕೊಡುಗೆ ನೀಡಿರುವ ಆಧುನಿಕ ಕೃಷಿ ವಿಧಾನಗಳು, ಸುಧಾರಿತ ಬೀಜಗಳು, ಯಾಂತ್ರೀಕರಣ ಮತ್ತು ಸುಧಾರಿತ ಮಾರುಕಟ್ಟೆ ತಂತ್ರಗಳ ಅಳವಡಿಕೆಯ ಬಗ್ಗೆ ಅಧ್ಯಯನವು ಒತ್ತಿ ಹೇಳುತ್ತಿದೆ. ಅರ್ಥಶಾಸ್ತ್ರಜ್ಞ ಮಧುರಾ ಸ್ವಾಮಿನಾಥನ್, ಎಂಎಸ್‌ಎಸ್‌ಆರ್‌ಎಫ್ ವಿಜ್ಞಾನಿ ಪಿ. ಯುವರಾಜ್ ಮತ್ತು ಪೌಷ್ಠಿಕತಜ್ಞ ಡಿಜೆ ನಿಥಿಲಾ ಅವರನ್ನೊಳಗೊಂಡ ತಂಡವು ಸಿದ್ಧಪಡಿಸಿದ " ಆರ್ಥಿಕತೆ ಬಲಪಡಿಸುವಲ್ಲಿ ಸಣ್ಣ ಧಾನ್ಯಗಳ ಪಾತ್ರ : ದಕ್ಷಿಣ ಭಾರತೀಯ ಅಧ್ಯಯನದಿಂದಾದ ಪಾಠಗಳು" ಎಂಬ ವರದಿಯಲ್ಲಿ ಈ ಸಂಶೋಧನೆಗಳನ್ನು ಬಹಿರಂಗಪಡಿಸಲಾಗಿದೆ.
ವರದಿಯು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಅನ್ನು ಆಚರಿಸಲು ನಡೆಸಿದ ಅಧ್ಯಯನದ ಭಾಗವಾಗಿದೆ ಮತ್ತು ಆದಾಯ ಹೆಚ್ಚಿಸಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಿರಿಧಾನ್ಯ ಕೃಷಿಯ ಸಾಮರ್ಥ್ಯದ ಮೇಲೆ ಇದು ಬೆಳಕು ಚೆಲ್ಲುತ್ತದೆ.
ಸಿರಿಧಾನ್ಯ ಕೃಷಿ : ಪ್ರಸ್ತುತ ಸ್ಥಿತಿ ಮತ್ತು ಸವಾಲುಗಳು ?: ಭಾರತವು ವಾರ್ಷಿಕವಾಗಿ 200 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿದ್ದರೆ, ಇದರಲ್ಲಿ ಸಿರಿಧಾನ್ಯ 20 ಮಿಲಿಯನ್ ಟನ್‌ಗಳಿಗಿಂತ ಕಡಿಮೆ ಕೊಡುಗೆ ನೀಡುತ್ತಿವೆ. ಸಿರಿಧಾನ್ಯ ಕೃಷಿಯ ನಿವ್ವಳ ಆದಾಯ ಪ್ರತಿ ಹೆಕ್ಟೇರ್‌ಗೆ ರೂ. 10,000 ಇದೆ. ಇದು ಅಕ್ಕಿ (224% ಆದಾಯ) ಮತ್ತು ಗೋಧಿ (304% ಆದಾಯ) ನಂತಹ ಇತರ ಧಾನ್ಯಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನ ಅಧ್ಯಯನ ತಿಳಿಸಿದೆ.
ಸಿರಿಧಾನ್ಯ ಕೃಷಿಯನ್ನು ರೈತರಿಗೆ ಹೆಚ್ಚು ಲಾಭದಾಯಕವಾಗಿಸಲು ಬೆಂಬಲ ಬೆಲೆ, ಮಾರುಕಟ್ಟೆ ಮಾರ್ಗಗಳು ಮತ್ತು ಸಂಶೋಧನಾ ಹೂಡಿಕೆಗಳು ಸೇರಿದಂತೆ ನೀತಿ ಮಧ್ಯಸ್ಥಿಕೆಗಳ ಅಗತ್ಯವನ್ನು ವರದಿ ಒತ್ತಿಹೇಳುತ್ತದೆ.
ಆರೋಗ್ಯ ಧಾನ್ಯಗಳಾಗಿ ಸಿರಿಧಾನ್ಯ : ಹೆಚ್ಚಿನ ಪೌಷ್ಟಿಕಾಂಶಕ್ಕೆ ಹೆಸರುವಾಸಿಯಾದ ಸಿರಿಧಾನ್ಯದಲ್ಲಿ ಪ್ರೋಟೀನ್, ಫೈಬರ್, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಅವು ಬಂಜರು ಭೂಮಿಯಲ್ಲಿಯೂ ಬೆಳೆಯುತ್ತವೆ ಮತ್ತು ವಿಪರೀತ ತಾಪಮಾನವನ್ನೂ ತಡೆದುಕೊಳ್ಳುತ್ತವೆ.
ಆಹಾರದಲ್ಲಿ ಸಿರಿಧಾನ್ಯವನ್ನ ಸೇರಿಸುವುದರಿಂದ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಸ್ಥೂಲಕಾಯದಂತಹ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-21) ಹೇಳಿದೆ.
ಕೇಂದ್ರ ಸರ್ಕಾರವು 2018 ರಿಂದ ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸೇರಿಸಿದೆ. ಶಾಲಾ ಮಕ್ಕಳಲ್ಲಿಯೂ ಅವುಗಳ ಸೇವನೆಯನ್ನು ಉತ್ತೇಜಿಸಿದೆ.
ಸಿರಿಧಾನ್ಯದ ಕುರಿತು ಕೆ ಹಿಲ್ಸ್ ಅಧ್ಯಯನ : ಭಾರತದಲ್ಲಿ ಸಿರಿಧಾನ್ಯ ಉತ್ಪಾದನೆಯಲ್ಲಿ ತಮಿಳುನಾಡು ಏಳನೇ ಸ್ಥಾನದಲ್ಲಿದೆ. 1990 ರಿಂದ MSSRF, ICRISAT ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕೆ ಹಿಲ್ಸ್ ಅವರು ಸಿರಿಧಾನ್ಯ ಕೃಷಿ ಪುನಶ್ಚೇತನಕ್ಕೆ ಶ್ರಮಿಸಿದ್ದಾರೆ. ಅವರು ನೀಡಿರುವ ಸಲಹೆಗಳು ಹೀಗಿವೆ.
- ಸುಧಾರಿತ ತಳಿಗಳೊಂದಿಗೆ ಬೀಜ ಬ್ಯಾಂಕ್‌ಗಳನ್ನು ಸ್ಥಾಪಿಸುವುದು.
- ಆಧುನಿಕ ಕೃಷಿ ಉಪಕರಣಗಳನ್ನು ಒದಗಿಸುವುದು.
- ನವೀನ ಕೃಷಿ ಮತ್ತು ಸಂಸ್ಕರಣಾ ತಂತ್ರಗಳ ಕುರಿತು ರೈತರಿಗೆ ತರಬೇತಿ ನೀಡುವುದು.
- ಸಿರಿಧಾನ್ಯ ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ನೋಡಿಕೊಳ್ಳುವ ಕೆ ಹಿಲ್ಸ್ ಆಗ್ರೋ ಡೈವರ್ಸಿಟಿ ಕನ್ಸರ್ವೇಟರ್ಸ್ ಫೆಡರೇಶನ್ ಅನ್ನು ಸ್ಥಾಪಿಸುವುದು.
ಕೆ. ಹಿಲ್ಸ್‌ನ ಸಿರಿಧಾನ್ಯ ಉತ್ಪನ್ನಗಳನ್ನು ಈಗ ತಮಿಳುನಾಡಿನ 12 ಜಿಲ್ಲೆಗಳಲ್ಲಿ "ಕೊಲ್ಲಿ ಹಿಲ್ಸ್ ನ್ಯಾಚುರಲ್ ಫುಡ್" ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಪ್ರಯತ್ನಗಳು ಸ್ಥಳೀಯ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸಿದೆ. ನಾಮಕ್ಕಲ್ ಜಿಲ್ಲೆಯಲ್ಲಿ ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು 39% ರಿಂದ 18% ಕ್ಕೆ ಇಳಿಸಿದೆ.
ಪ್ರಮುಖ ಶಿಫಾರಸುಗಳು :
ವರದಿಯು ಸಿರಿಧಾನ್ಯ ಕೃಷಿ ಮತ್ತು ಬಳಕೆಯನ್ನು ಹೆಚ್ಚಿಸಲು ಹಲವಾರು ಶಿಫಾರಸುಗಳನ್ನು ನೀಡಿದೆ :
- ಆಧುನಿಕ ಕೃಷಿ ಪದ್ಧತಿ ಮತ್ತು ಉತ್ತಮ ಗುಣಮಟ್ಟದ ಬೀಜಗಳ ಮೂಲಕ ಇಳುವರಿಯನ್ನು ಹೆಚ್ಚಿಸುವುದು.
- ಸಿರಿಧಾನ್ಯ ಸಂಸ್ಕರಣೆಯಲ್ಲಿ ಮಹಿಳೆಯರ ಕೆಲಸದ ಹೊರೆ ಕಡಿಮೆ ಮಾಡಲು ಪರಿಷ್ಕರಿಸುವ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವುದು.
- ಉತ್ತಮ ಮಾರುಕಟ್ಟೆ ಪ್ರವೇಶಕ್ಕಾಗಿ ರೈತರ ನೇತೃತ್ವದ ಮಾರುಕಟ್ಟೆ ಒಕ್ಕೂಟಗಳನ್ನು ಸ್ಥಾಪಿಸುವುದು.
ತಜ್ಞರ ಅಭಿಪ್ರಾಯ : ಭಾರತೀಯ ಸಾಂಖ್ಯಿಕ ಸಂಸ್ಥೆಯ ಆರ್ಥಿಕ ವಿಶ್ಲೇಷಣೆ ವಿಭಾಗದ ಮುಖ್ಯಸ್ಥರಾದ ಪ್ರೊ. ಮಧುರಾ ಸ್ವಾಮಿನಾಥನ್ ಅವರು ಮಾತನಾಡಿ, “ಕೃಷಿ ಜೀವವೈವಿಧ್ಯವನ್ನು ಸಂರಕ್ಷಿಸುವಲ್ಲಿ ಸಿರಿಧಾನ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಸುಸ್ಥಿರ ಬೆಳವಣಿಗೆ ಖಾತ್ರಿಪಡಿಸುವ ಸಂಶೋಧನೆ, ವಿಸ್ತರಣಾ ಕಾರ್ಯಕ್ರಮಗಳು ಮತ್ತು ವಿಶ್ವಾಸಾರ್ಹ ಮಾರ್ಕೆಟಿಂಗ್ ಚಾನೆಲ್‌ಗಳೊಂದಿಗೆ ಕೃಷಿಯನ್ನು ಹೆಚ್ಚು ಪ್ರೋತ್ಸಾಹಿಸಬೇಕು. ದಕ್ಷಿಣ ಭಾರತದ ಮಾದರಿಯು ರಾಷ್ಟ್ರವ್ಯಾಪಿ ವಿಸ್ತರಣೆಗೆ ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ'' ಎಂದು ಹೇಳಿದ್ದಾರೆ.