ನವದೆಹಲಿ: ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಧಿಕ್ಕರಿಸಿ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ ಆರೋಪದ ಮೇಲೆ ಅನರ್ಹಗೊಂಡಿರುವ 6 ಕಾಂಗ್ರೆಸ್ ಶಾಸಕರ ಅನರ್ಹತೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅವರಿಗೆ ಮತ ಚಲಾಯಿಸಲು ಅಥವಾ ಸದನದ ಕಲಾಪಗಳಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು, ಸ್ಪೀಕರ್ ಆದೇಶವನ್ನು ನಾವು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಅರ್ಜಿಯ ಮೇಲೆ ನೋಟಿಸ್ ನೀಡಬಹುದು. ಉಪಚುನಾವಣೆ ವಿಚಾರದಲ್ಲಿ ಏನು ಮಾಡಬೇಕೆಂದು ನೋಡುತ್ತೇವೆ. ಆದರೆ ನೀವು ಮತ ಚಲಾಯಿಸಲು ಮತ್ತು ವಿಧಾನಸಭೆಯ ಭಾಗವಾಗಲು ನಾವು ಅನುಮತಿಸುವುದಿಲ್ಲ ಎಂದು ಹೇಳಿತು.
ಇನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ಹಿಮಾಚಲ ವಿಧಾನಸಭಾ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರ ಕಚೇರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ. 14 ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ಬಂಡಾಯ ಶಾಸಕರ ಅನರ್ಹತೆ ಅರ್ಜಿಯ ತೀರ್ಪು ಬಾಕಿ ಇರುವ ಕಾರಣ, ಅವರು ವಿಧಾನಸಭೆಯಲ್ಲಿ ಮತ ಚಲಾಯಿಸಲು ಅಥವಾ ವಿಧಾನಸಭೆಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಖಾಲಿಯೆಂದು ಘೋಷಿಸಲಾದ ಆರು ಸ್ಥಾನಗಳಿಗೆ ಉಪಚುನಾವಣೆಗಾಗಿ ಚುನಾವಣಾ ಆಯೋಗದ ಅಧಿಸೂಚನೆಯನ್ನು ಬಾಕಿ ಇರಿಸಬೇಕೇ ಎಂದು ಪರಿಗಣಿಸುವುದಾಗಿ ನ್ಯಾಯಾಲಯ ಕೇಳಿದೆ. ಬಂಡಾಯ ಶಾಸಕರು ವಾರದೊಳಗೆ ತಮ್ಮ ವಾದ ಮಂಡಿಸುವಂತೆ ಸೂಚಿಸಲಾಗಿದೆ. ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ನಂತರ ಸ್ಪೀಕರ್ ಆರು ಜನ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದ್ದರು. ರಾಜ್ಯ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರ ನಿರ್ಧಾರದ ವಿರುದ್ಧ ಈ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಹರ್ಷ್ ಮಹಾಜನ್ ಪರವಾಗಿ ಕಾಂಗ್ರೆಸ್ ಬಂಡಾಯ ಶಾಸಕರು ಮತ ಚಲಾಯಿಸಿದ್ದರು. ನಂತರ, ಪಕ್ಷದ ವಿಪ್ ಉಲ್ಲಂಘಿಸಿ ಎಲ್ಲಾ 6 ಶಾಸಕರು ಕೂಡ ಬಜೆಟ್ ಮೇಲಿನ ಮತದಾನಕ್ಕೆ ಗೈರುಹಾಜರಾಗಿದ್ದರು.
ಎಲ್ಲಾ 6 ಶಾಸಕರ ಅಡ್ಡ ಮತದಾನದಿಂದಾಗಿ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಹರ್ಷ್ ಮಹಾಜನ್ ವಿರುದ್ಧ ಸೋತರು. ಹರ್ಷ್ ಮಹಾಜನ್ ಒಮ್ಮೆ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ರಾಜಕೀಯ ಸಲಹೆಗಾರರಾಗಿದ್ದರು. ಆದರೆ ಅವರು ಕಾಂಗ್ರೆಸ್ ನಾಯಕನನ್ನು ಸೋಲಿಸಿದರು.
ಮತ್ತೊಂದೆಡೆ, ಆರು ಬಂಡಾಯ ಕಾಂಗ್ರೆಸ್ ಶಾಸಕರಾದ ಸುಧೀರ್ ಶರ್ಮಾ, ರವಿ ಠಾಕೂರ್, ರಾಜಿಂದರ್ ರಾಣಾ, ಇಂದರ್ ದತ್ ಲಖನ್‌ಪಾಲ್, ಚೈತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೊ ಅವರು ಕಾಂಗ್ರೆಸ್ ಪಕ್ಷದ ವಿಪ್ ಅನ್ನು ಧಿಕ್ಕರಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಹಾಕಿದ್ದಾರೆ. ಇದರ ಪರಿಣಾಮವಾಗಿ ಸ್ಪೀಕರ್ ಫೆಬ್ರವರಿ 29 ರಂದು ಆರು ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿದರು. ಇದರೊಂದಿಗೆ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯರ ಸಂಖ್ಯೆ 68ರಿಂದ 62ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಕಾಂಗ್ರೆಸ್ ಶಾಸಕರ ಸಂಖ್ಯೆಯೂ 40 ರಿಂದ 34 ಕ್ಕೆ ಇಳಿದಿದೆ. ಇನ್ನು ಲೋಕಸಭೆ ಸ್ಥಾನಗಳ ಜೊತೆಗೆ ಖಾಲಿ ಇರುವ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿತ್ತು.
ಓದಿ: ಶಿವಮೊಗ್ಗ: ಸುಳ್ಳುಗಳೇ ಕಾಂಗ್ರೆಸ್ ಪಕ್ಷದ ಬಂಡವಾಳ; ಪ್ರಧಾನಿ ಮೋದಿ ಟೀಕಾಪ್ರಹಾರ, ಈಶ್ವರಪ್ಪ ಗೈರು