ಭೋಪಾಲ್/ದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸುವ ಬಗ್ಗೆ ಅನುಮಾನ ಮೂಡಿದೆ. ಮಧ್ಯಪ್ರದೇಶದಿಂದ ಸೋನಿಯಾ ಗಾಂಧಿ ರಾಜ್ಯಸಭೆ ಪ್ರವೇಶಿಸಲಿ ಎಂದು ಅಲ್ಲಿನ ಪಕ್ಷದ ನಾಯಕರು ಮನವಿ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ. ಇದರ ಜೊತೆಗೆ, ಮಗಳು ಪ್ರಿಯಾಂಕಾ ಗಾಂಧಿ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಬೇಕೆಂದು ಪಕ್ಷದಿಂದ ಒತ್ತಾಯವೂ ಕೇಳಿ ಬರುತ್ತಿದೆ.
ಮಧ್ಯಪ್ರದೇಶ ಕಾಂಗ್ರೆಸ್ ನಾಯಕರ ಪ್ರಕಾರ, ಮಾಜಿ ಸಿಎಂ ಮತ್ತು ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ತಮ್ಮ ರಾಜ್ಯದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿರುವ ತಮ್ಮ ಪಕ್ಷದ ಎಲ್ಲಾ ಸಂಸದರು ಮತ್ತು ಶಾಸಕರು ತಮ್ಮ ರಾಜ್ಯದಿಂದ ಸೋನಿಯಾ ಅವರನ್ನು ರಾಜ್ಯಸಭೆಗೆ ಕಳುಹಿಸಲು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಇದರಿಂದ ಸಂಸತ್ತಿನಲ್ಲಿ ಪರಿಣಾಮಕಾರಿ ಧ್ವನಿ ಸಿಕ್ಕಂತಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಮೇಲ್ಮನೆಯ 56 ಸ್ಥಾನಗಳಿಗೆ ಫೆಬ್ರವರಿ 27ರಂದು ನಡೆಯಲಿರುವ ಚುನಾವಣೆಗೆ ಮುಂಚಿತವಾಗಿಯೇ ಸೋನಿಯಾ ಗಾಂಧಿಯವರಿಗೆ ರಾಜ್ಯಸಭಾ ಸ್ಫರ್ಧೆಯ ಪ್ರಸ್ತಾಪ ಬಂದಿತ್ತು ಎನ್ನಲಾಗಿದೆ. ಆಡಳಿತಾರೂಢ ಬಿಜೆಪಿ ಈ ಬಾರಿ ನಾಲ್ವರು ಸದಸ್ಯರನ್ನು ಆಯ್ಕೆ ಮಾಡುವಷ್ಟು ಶಾಸಕಾಂಗ ಬಲ ಹೊಂದಿದೆ. 230 ಸದಸ್ಯರ ಸಂಸದರ ಎಂಪಿ ವಿಧಾನಸಭೆಯಲ್ಲಿ ಬಿಜೆಪಿ 163 ಶಾಸಕರನ್ನು ಹೊಂದಿದ್ದು ಕಾಂಗ್ರೆಸ್ 66 ಶಾಸಕರನ್ನು ಹೊಂದಿದೆ. ಒಂದು ವೇಳೆ ಸೋನಿಯಾ ಗಾಂಧಿ ಮಧ್ಯಪ್ರದೇಶದಿಂದ ಸ್ಪರ್ಧಿಸದೇ ಹೋದಲ್ಲಿ ಕಮಲ್ ನಾಥ್ ಅವರನ್ನು ರಾಜ್ಯಸಭೆಗೆ ಪರಿಗಣಿಸಲಾಗುತ್ತದೆ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಶಹನಾಜ್ ಗನೈ ಬಿಜೆಪಿ ಸೇರ್ಪಡೆ