ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬಂಗಾಳದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಅಚ್ಚರಿಯ ಅಂಶಗಳನ್ನು ಪತ್ತೆ ಮಾಡಿದೆ. ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಗಂಭೀರ ಸ್ವರೂಪದ ಆರೋಪಗಳು ಒಂದೊಂದಾಗಿ ಹೊರ ಬರುತ್ತಿವೆ. ಘೋಷ್ ಹಣದಾಸೆಗೆ ಅನಾಥ ಶವಗಳನ್ನು ಮಾರಾಟ ಮಾಡುತ್ತಿದ್ದುದು, ಬಳಸಿ ಬಿಸಾಡಿದ ಸಿರೆಂಜ್, ಇತರ ವಸ್ತುಗಳನ್ನು ಮರುಬಳಕೆ ಮಾಡುತ್ತಿದ್ದ ಆಘಾತಕಾರಿ ವಿಷಯಗಳು ಎಸ್‌ಐಟಿ ದೊರೆತಿವೆ.
ಪ್ರಕರಣದ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ ಎಸ್‌ಐಟಿ, ಇದೇ ಕಾಲೇಜಿನಲ್ಲಿ ಮೊದಲು ಬೋಧಕರಾಗಿದ್ದ, ಈಗ ಮುರ್ಷಿದಾಬಾದ್ ಕಾಲೇಜಿನ ಉಪ ಅಧೀಕ್ಷರಾಗಿರುವ ಅಖ್ತರ್ ಅಲಿ ಅವರನ್ನು ವಿಚಾರಣೆ ನಡೆಸಿದ್ದು, ಈ ಸಂಚಲನಕಾರಿ ಅಂಶಗಳನ್ನು ಅವರು ಬಾಯ್ಬಿಟ್ಟಿದ್ದಾರೆ.
ಸಂದೀಪ್ ಘೋಷ್ ವಿರುದ್ಧ ಸಾಲು ಸಾಲು ಆರೋಪ: ಕಾಲೇಜಿನ ಆಸ್ತಿಗಳನ್ನು ಮಂಡಳಿಗೆ ತಿಳಿಸದೆ ಗುತ್ತಿಗೆಗೆ ನೀಡುತ್ತಿದ್ದರು. ಆಸ್ಪತ್ರೆಗೆ ಅಗತ್ಯವಾದ ಉಪಕರಣಗಳು ಮತ್ತು ಔಷಧಿಗಳ ಪೂರೈಕೆದಾರರ ಆಯ್ಕೆಯಲ್ಲಿ ಸ್ವಜನಪಕ್ಷಪಾತ ಮಾಡುತ್ತಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ಟೆಂಡರ್ಗಳನ್ನು ಅನರ್ಹರಿಗೆ ನೀಡುತ್ತಿದ್ದರು. ಪೂರೈಕೆದಾರರಿಂದ ಶೇಕಡಾ 20 ಕಮಿಷನ್ ಪಡೆಯುತ್ತಿದ್ದರು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾಲೇಜಿನ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಪಾಸ್ ಮಾಡಿಸಿಕೊಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಬರುವ ಅನಾಥ ಶವಗಳ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಬಳಸಿದ ಸಿರಿಂಜ್, ಗ್ಲುಕೋಸ್ ಬಾಟಲಿಗಳು, ರಬ್ಬರ್ ಗ್ಲೌಸ್ಗಳನ್ನು ಇಬ್ಬರು ಬಾಂಗ್ಲಾದೇಶಿಯರ ಸಹಾಯದಿಂದ ಮರುಬಳಕೆ ಮಾಡಿಸುತ್ತಿದ್ದರು. ಈ ಎಲ್ಲಾ ಅಕ್ರಮಗಳ ಕುರಿತು ಈ ಹಿಂದೆ ವಿಜಿಲೆನ್ಸ್ ಕಮಿಷನ್, ಎಸಿಬಿ ಮತ್ತು ಆರೋಗ್ಯ ಇಲಾಖೆಗೆ ದೂರು ನೀಡಿದ್ದೇನೆ ಎಂದು ಅಖ್ತರ್ ಎಸ್ಐಟಿಗೆ ತಿಳಿಸಿದ್ದಾರೆ. ಈ ಎಲ್ಲಾ ಆರೋಪಗಳ ಆಧಾರದ ಮೇಲೆ ಸಂದೀಪ್ ಘೋಷ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವೈಯಕ್ತಿಕ ಜೀವನದಲ್ಲೂ ಘೋಷ್ ಕ್ರೂರಿ: ಸಂದೀಪ್ ಘೋಷ್ ವೃತ್ತಿಯಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಕ್ರೂರಿಯಾಗಿ ನಡೆದುಕೊಳ್ಳುತ್ತಿದ್ದರು ಎಂಬ ಅಂಶಗಳು ಬಯಲಾಗಿವೆ. ಪತ್ನಿಯ ಮೇಲೂ ಆತ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಆಕೆ ಮಗುವಿಗೆ ಜನ್ಮ ನೀಡಿದ 14 ದಿನವಾಗಿದ್ದಾಗ ಯಾವುದೋ ಕಾರಣಕ್ಕೆ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರಿಂದ ಆಕೆಗೆ ಶಸ್ತ್ರಚಿಕಿತ್ಸೆ ವೇಳೆ ಹಾಕಲಾಗಿದ್ದ ಹೊಲಿಗೆ ಬಿಚ್ಚಿ ತೀವ್ರ ರಕ್ತಸ್ರಾವ ಉಂಟಾಗಿತ್ತು. ಸ್ಥಳೀಯರು ಇದನ್ನು ಹಲವು ಬಾರಿ ಕಂಡಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಪ್ರಮುಖ ಆರೋಪಿಗೆ ಸುಳ್ಳು ಪತ್ತೆ ಪರೀಕ್ಷೆ: ಮತ್ತೊಂದೆಡೆ, ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಮಂಗಳವಾರ ಪರೀಕ್ಷೆ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ, ವಕೀಲರ ಕೊರತೆಯಿಂದ ಅದನ್ನು ಮುಂದೂಡಲಾಗಿದೆ.
ಇದನ್ನೂ ಓದಿ: ಬಂಗಾಳ ವೈದ್ಯೆಯ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆಗೆ ಮುಂದಾದ ಸೌರವ್ ಗಂಗೂಲಿ - Sourav Ganguly