ಸಿದ್ದಿಪೇಟೆ (ತೆಲಂಗಾಣ): ರೇಷ್ಮೆ ಕೃಷಿಯಲ್ಲಿ ಸಿದ್ದಪೇಟೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ತೆಲಂಗಾಣ ರಾಜ್ಯ ರಚನೆಯಾಗುವುದಕ್ಕೂ ಮುನ್ನ ರಾಜ್ಯದಲ್ಲಿ ಕೇವಲ 30 ರಿಂದ 50 ಎಕರೆಯಲ್ಲಿ ಮಾತ್ರ ಹಿಪ್ಪುನೇರಳೆ ಕೃಷಿ ಮಾಡಲಾಗುತ್ತಿತ್ತು. ಆದರೆ, ಸದ್ಯ ತೆಲಂಗಾಣದಲ್ಲಿ 1127 ಎಕರೆ ಪ್ರದೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೆರವಿನೊಂದಿಗೆ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ರೇಷ್ಮೆ ಕೃಷಿಗೆ ಮೂಲ ಈ ಹಿಪ್ಪುನೇರಳೆ ಆಗಿರುವುದರಿಂದ, ಹಿಪ್ಪು ನೇರಳೆ ಕೃಷಿ ಹಾಗೂ ರೇಷ್ಮೆ ಕೃಷಿಯ ಮೂಲಕ ಇಲ್ಲಿನ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾರೆ.
ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಬಂದರೆ ರೈತರಿಗೆ ಅದಕ್ಕಿಂತ ಖುಷಿಯ ವಿಚಾರ ಬೇರೆ ಇಲ್ಲ. ಹೀಗೆ ಸಿದ್ದಿಪೇಟೆ ಜಿಲ್ಲೆಯ ಚಂದಲಾಪುರದ ರೈತರು ಕಡಿಮೆ ಹೂಡಿಕೆ ಮಾಡಿ ಹಿಪ್ಪುನೇರಳೆ ಕೃಷಿ ಮಾಡಿ, ಹೆಚ್ಚು ಇಳುವರಿ ಪಡೆದು ಲಾಭ ಗಳಿಸುತ್ತಿದ್ದಾರೆ. ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡುವ ಮೂಲಕ ಸಾಫ್ಟ್ವೇರ್ ಉದ್ಯೋಗಿಗಳಿಗೆ ಪೈಪೋಟಿ ನೀಡುತ್ತಿದ್ದಾರೆ.
ಒಮ್ಮೆ ಹಿಪ್ಪು ನೇರಳೆ ಗಿಡಗಳನ್ನು ನೆಟ್ಟರೆ ವರ್ಷವಿಡೀ ಇಳುವರಿ ಕೊಡುತ್ತದೆ. ಇತರ ಬೆಳೆಗಳಿಂತ ಇದು ವಿಭಿನ್ನವಾಗಿದ್ದು, ರೇಷ್ಮೆ ಹುಳಗಳಿಗೆ ಹಿಪ್ಪುನೇರಳೆ ಎಲೆಗಳಾದರೆ, ಇದರ ಜೊತೆಗೆ ಮಲ್ಬರಿ ಹಣ್ಣುಗಳೂ ದೊರೆಯುತ್ತವೆ. ಈ ಹಿಪ್ಪುನೇರಳೆ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳಬಹುದು. ಗಿಡಗಳನ್ನು ನೆಟ್ಟ ಪ್ರಾರಂಭದ ಹಂತದಲ್ಲಿ ಒಂದು ಅಥವಾ ಎರಡು ಬಾರಿ ನೀರು ಸಾಕು. ಪ್ರತಿ ಎರಡು ವಾರಗಳಿಗೊಮ್ಮೆ ಇದರ ಎಲೆಗಳನ್ನು ಕತ್ತರಿಸಿ ರೇಷ್ಮೆ ಹುಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ರೇಷ್ಮೆ ಹುಳುಗಳು ಬೆಳೆದು ಉತ್ತಮ ಇಳುವರಿ ನೀಡುತ್ತವೆ ಎನ್ನುತ್ತಾರೆ ರೈತರು.
ರೇಷ್ಮೆ ಕೃಷಿಕ ಶ್ರೀನಿವಾಸ್ ಮಾತನಾಡಿ, "ಆರಂಭದಲ್ಲಿ ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದೆ. ಸಂಬಳ ಸೀಮಿತವಾಗಿದ್ದರಿಂದ ನಾನು ಈ ರೇಷ್ಮೆ ಕೃಷಿ ಮಾಡಲು ಮುಂದಾದೆ. ಯೂಟ್ಯೂಬ್ನಲ್ಲಿ ಕೆಲವು ವಿಡಿಯೋಗಳನ್ನು ನೋಡಿ ಕೃಷಿಯ ಬಗ್ಗೆ ಸ್ವಲ್ಪ ಮಾಹಿತಿ ಪಡೆದುಕೊಂಡೆ. ನಂತರ ನನ್ನಲ್ಲಿದ್ದ ಸ್ವಲ್ಪ ಜಮೀನಿನಲ್ಲಿ ರೇಷ್ಮೆ ಕೃಷಿ ಪ್ರಾರಂಭಿಸಿದೆ. ಈಗ ಉತ್ತಮ ಇಳುವರಿ ಪಡೆಯುತ್ತಿದ್ದೇನೆ." ಎಂದು ಹೇಳಿದರು.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ರೇಷ್ಮೆ ಬೆಳೆಯುವ ರೈತರು ಹೆಚ್ಚಾಗುತ್ತಿದ್ದಾರೆ. ಬೇರೆ ಸಾಮಾನ್ಯ ಬೆಳೆಗಳಲ್ಲಿ ನಷ್ಟ ಅನುಭವಿಸುತ್ತಿರುವ ರೈತರು ರೇಷ್ಮೆ ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ರೇಷ್ಮೆ ಹುಳ ಹಾಗೂ ಶೆಡ್ಗಳ ಖರೀದಿಗೆ ಕೇಂದ್ರ ಸರ್ಕಾರ ಸಹಾಯಧನ ನೀಡುತ್ತಿದೆ. ಪ್ರತಿ 21 ದಿನಗಳಿಗೊಮ್ಮೆ ಬೆಳೆ ಕಟಾವು ಮಾಡಲಾಗುತ್ತದೆ. 20 ಸಾವಿರ ರೂಪಾಯಿವರೆಗೆ ಹೂಡಿಕೆ ಮಾಡಬೇಕು. ರೇಷ್ಮೆ ಹುಳಗಳ ಖರೀದಿಗೆ ಮಾತ್ರ ಖರ್ಚಾಗುತ್ತದೆ. ಸಾಂಪ್ರದಾಯಿಕ ಬೆಳೆಗಳನ್ನು ಹೊರತುಪಡಿಸಿ ಬೇರೆ ಬೇರೆ ವಿಧಾನಗಳನ್ನು ಪ್ರಯತ್ನಿಸಿದರೆ ಲಾಭ ಪಡೆಯಬಹುದು ಎಂಬುದನ್ನು ರೇಷ್ಮೆ ಕೃಷಿಕರು ಸಾಬೀತುಪಡಿಸಿದ್ದಾರೆ.
ತೆಲಂಗಾಣದಲ್ಲಿ ಎರಡು ಬಗೆಯ ಹಿಪ್ಪುನೇರಳೆ ಕೃಷಿ ಇದೆ. ಒಂದು ಬಯೋಲ್ಟಿನ್ ಬೆಳೆ ಹಾಗೂ ಇನ್ನೊಂದು ದಸಾಲಿ ರೇಷ್ಮೆ. ಒಂದು ತಿಂಗಳಲ್ಲಿ ಕೇವಲ 21 ದಿನಗಳ ಮಾತ್ರ ಕೆಲಸ ಇರುತ್ತದೆ. ರೈತರು ರೇಷ್ಮೆ ಕೃಷಿ ಪ್ರಾರಂಭಿಸಿದ ಎರಡನೇ ವರ್ಷದಿಂದ ಒಂದು ಎಕರೆಗೆ ಲಕ್ಷ ಲಕ್ಷ ಆದಾಯ ಪಡೆಯುತ್ತಾರೆ ಎನ್ನುತ್ತಾರೆ ರೇಷ್ಮೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಇಂದ್ರಸೇನಾ ರೆಡ್ಡಿ.
ಇದನ್ನೂ ಓದಿ: ಕಡಲಿನಲ್ಲಿ ಮತ್ಸ್ಯಕ್ಕೂ ಬರ: ಬಂದರಿನಲ್ಲಿ ಲಂಗರು ಹಾಕುತ್ತಿರುವ ಬೋಟ್ಗಳು - fish famine