ಜೋಧಪುರ (ರಾಜಸ್ಥಾನ): ಸೂರ್ಯನ ಕಡುಕೋಪಕ್ಕೆ ತುತ್ತಾಗಿ ರಾಜಸ್ಥಾನ ಶಾಖದಲ್ಲಿ ಬೇಯುತ್ತಿದೆ. ರಾಜ್ಯದಲ್ಲಿ ಬಿಸಿಗಾಳಿ ನಿರಂತರವಾಗಿ ಹೆಚ್ಚುತ್ತಿದೆ. 24 ಗಂಟೆಯಲ್ಲಿ ಶಾಖಕ್ಕೆ 5 ಮಂದಿ ಸಾವಿಗೀಡಾಗಿದ್ದಾರೆ. ಜಲೋರ್‌ನಲ್ಲಿ ಮಹಿಳೆ ಸೇರಿ ನಾಲ್ಕು ಮಂದಿ ಮತ್ತು ಜೋಧ್‌ಪುರದಲ್ಲಿ ಒಬ್ಬರ ಸಾವು ದೃಢಪಟ್ಟಿದೆ.
ಜಿಲ್ಲಾಡಳಿತದ ಮಾಹಿತಿಯ ಪ್ರಕಾರ, ಇಲ್ಲಿನ ರೈಲು ನಿಲ್ದಾಣದ ಮೋದ್ರನ್ ಸಮೀಪದ ನರಪಾರದ ನಿವಾಸಿ ಸೂರಜ್ದನ್ ಮತ್ತು ಗುಜರಾತ್‌ನ ದೀಸಾ ನಿವಾಸಿ ಸೋಹನ್ ರಾಮ್ ರೈಲ್ವೆ ನಿಲ್ದಾಣದಲ್ಲಿಯೇ ಕುಸಿದು ಬಿದ್ದಿದ್ದಾರೆ. ಜನರು ಅವರನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಮನೆಯಲ್ಲಿ ಕೆಲಸದ ವೇಳೆ ಮಹಿಳೆ ಸಾವು: ಸಫಡಾ ನಿವಾಸಿ ಕಮಲಾ ದೇವಿ (42) ಎಂಬುವವರು ತೀವ್ರ ಶಾಖದಿಂದ ಸಾವಿಗೀಡಾಗಿದ್ದಾರೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ಪ್ರಜ್ಞಾಹೀನಳಾಗಿ ಕೆಳಗೆ ಬಿದ್ದಿದ್ದಾಳೆ. ಕುಟುಂಬಸ್ಥರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ. ಇದು ಜಲೋರ್‌ನಲ್ಲಿ ಸಂಭವಿಸಿದ ಮೂರನೇ ಸಾವಾಗಿದೆ.
ಅಹೋರ್‌ನ ವೇದಿಯ ನಿವಾಸಿಯಾದ ಫುಲಾರಾಮ್ ಅವರು ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಜೋಧಪುರದ ಸಾವು: ಜೋಧಪುರದಲ್ಲಿಯೂ ಸಹ ಬಿಸಿಲಿಗೆ ಒಬ್ಬರು ಸಾವನ್ನಪ್ಪಿದ್ದಾರೆ. ಮಿಲ್ಕ್‌ಮ್ಯಾನ್ ಕಾಲೋನಿ ನಿವಾಸಿ 50 ವರ್ಷದ ಶ್ಯಾಮಲಾಲ್ ಅವರು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದಾಗ ಐಟಿಐ ವೃತ್ತದಲ್ಲಿ ಕುಸಿದು ಬಿದ್ದಿದ್ದಾರೆ. ಇದರ ನಂತರ ಅವರನ್ನು ಎಂಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಸಾವು ದೃಢಪಡಿಸಿದ್ದಾರೆ. ಸಾವಿಗೆ ಶಾಖದ ಹೊಡೆತವೇ ಕಾರಣ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಸೂರ್ಯನ ಪ್ರತಾಪ: ರಾಜಸ್ಥಾನದಲ್ಲಿ ಬಿಸಿಗಾಳಿ ಮತ್ತಷ್ಟು ತೀವ್ರವಾಗಿದೆ. ಪಿಲಾನಿ ಎಂಬಲ್ಲಿ ಬುಧವಾರ 47.2 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ತಾಪಮಾನ ದಾಖಲಾಗಿತ್ತು. ರಾಜ್ಯದ ಬಹುತೇಕ ನಗರಗಳಲ್ಲಿ 43 ರಿಂದ 47 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಭಾಗಗಳಲ್ಲಿ ತಾಪಮಾನ 45 ರಿಂದ 48 ಡಿಗ್ರಿಗೆ ತಲುಪಲಿದೆ ಎಂದು ಇಲಾಖೆ ಎಚ್ಚರಿಸಿದೆ. ಹಲವಾರು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಹೊರಡಿಸಲಾಗಿದೆ.
"ರಾಜ್ಯದ ಕೆಲ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸರಾಸರಿಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ" ಎಂದು ಜೈಪುರದ ಹವಾಮಾನ ಕೇಂದ್ರದ ನಿರ್ದೇಶಕ ಆರ್.ಎಸ್. ಶರ್ಮಾ ಹೇಳಿದ್ದಾರೆ. ಬಾರ್ಮರ್ನಲ್ಲಿ 46.2 ಡಿಗ್ರಿ ಸೆಲ್ಸಿಯಸ್, ಗಂಗಾನಗರದಲ್ಲಿ 46.3, ಫಲೋಡಿಯಲ್ಲಿ 46, ಬಿಕಾನೇರ್ನಲ್ಲಿ 44.8, ಕೋಟಾದಲ್ಲಿ 44.8 ಮತ್ತು ಜೈಪುರದಲ್ಲಿ 44.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇದನ್ನೂ ಓದಿ: ಕಾದ ಕುಲುಮೆಯಂತಾದ ರಾಜಸ್ಥಾನ: 72 ಗಂಟೆಗಳಲ್ಲಿ ಉಷ್ಣಾಂಶ 48 ಡಿಗ್ರಿಗೆ ತಲುಪುವ ಸಾಧ್ಯತೆ - Severe Heat Wave in Rajasthan