ವಾರಾಣಸಿ: ಕಾಶಿಯ ನಿರಂಜನಿ ಅಖಾರದ ಮಹಾಮಂಡಲೇಶ್ವರದ ಹಿರಿಯ ಸ್ವಾಮಿ ರಾಮಚಂದ್ರ ಗಿರಿ ಭಾನುವಾರ ನಿಧನರಾದರು. 104 ವರ್ಷದ ಹಿರಿಯ ಸಂತರು ಕಳೆದ ಮೂರು ವರ್ಷಗಳಿಂದ ತಮ್ಮ ದೇಹ ದುರ್ಬಲವಾಗಿರುವ ಹಿನ್ನಲೆ ಆಹಾರ ತ್ಯಜಿಸಿ, ದ್ರವಾಹಾರದಲ್ಲಿದ್ದರು. ಅವರ ಭಕ್ತರು ಬಿರ್ದೋಪುರದಲ್ಲಿರುವ ಕೈಲಾಸ ಮಠದಿಂದ ಅವರ ಪಾರ್ಥಿವ ಶರೀರದೊಂದಿಗೆ ಮೆರವಣಿಗೆ ನಡೆಸಿದರು. ಗುಜರಾತ್ ಮೂಲದ ಸಂತರು ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಆಧ್ಯಾತ್ಮದಲ್ಲಿ ಆಳವಾದ ಆಸಕ್ತಿ ಹೊಂದಿದ ಹಿನ್ನಲೆ ಹುದ್ದೆ ತ್ಯಜಿಸಿ, ಇದರಲ್ಲೇ ತಲ್ಲೀನರಾಗಿದ್ದರು.
ಗುಜರಾತ್ನ ಗಾಂಧಿನಗರದ ವಿಲೋದರ ಗ್ರಾಮದಲ್ಲಿ ಜನಿಸಿದ ಸ್ವಾಮಿ ರಾಮಚಂದ್ರ ಗಿರಿ, ಪ್ರಾಥಮಿಕ ಶಿಕ್ಷಣದ ಬಳಿಕ ಗುಜರಾತ್ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದ್ದರು. ದೇವರ ಧ್ಯಾನದಲ್ಲೇ ಅವರ ಮನಸು ಮಗ್ನವಾದ ಹಿನ್ನೆಲೆಯಲ್ಲಿ ಉದ್ಯೋಗವನ್ನು ತೊರೆದಿದ್ದರು. ಬಿಹಾರದ ಮಗಧಕ್ಕೆ ಬಂದ ಅವರು ಗಂಗಾನದಿಯ ದಡದಲ್ಲಿರುವ ಆಲದ ಮರದ ಕೆಳಗೆ 12 ವರ್ಷಗಳ ಕಾಲ ತಪಸ್ಸು ಮಾಡಿದರು. ಭಿಕ್ಷಾಟನೆಯೊಂದಿಗೆ ಗೀತಾ ಬೋಧನೆ ಮಾಡಿ ಜೀವನ ಸಾಗಿಸುತ್ತಿದ್ದರು.
1949ರಲ್ಲಿ ಕಾಶಿಗೆ ಬಂದ ಅವರು ಸಂತ ಸೇವಾಮನೋಭಾವದಿಂದ ಪ್ರಭಾವಿತರಾದರು. ಈ ವೇಳೆ ಅವರಿಗೆ 1980ರಲ್ಲಿ ಅಂದಿನ ಕೈಲಾಸ ಮಠದ ಮಹಾಮಂಡಲೇಶ್ವರರು ಆಶ್ರಮದ ಜವಾಬ್ದಾರಿ ವಹಿಸಿದರು. ಸ್ವಾಮಿ ರಾಮಚಂದ್ರ ಗಿರಿ ಅವರ ಉತ್ತಾರಾಧಿಕಾರಿ ಮಹಾಮಂಡಲೇಶ್ವರ ಅಶುತೋಷಾನಂದ ಗಿರಿ ಅವರು ಹೇಳುವಂತೆ ನಿರಂಜನಿ ಅಖಾರದ ಮಹಾಮಂಡಲೇಶ್ವರದ ಹಿರಿಯ ಸಂತ ಅವರಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅನ್ನಾಹಾರ ತ್ಯಜಿಸಿದ ಅವರು ಸಾಕಷ್ಟು ನಿಶ್ಯಕ್ತಿಗೊಂಡ ಹಾಸಿಗೆ ಹಿಡಿದಿದ್ದರು. ಕೇವಲ ದ್ರವಾಹಾರವನ್ನು ಮಾತ್ರ ಸೇವಿಸುತ್ತಿದ್ದರು. ಅವರು ಭಾನುವಾರ ಇಹಲೋಕ ತ್ಯಜಿಸಿದ್ದು, ಸೋಮವಾರ ಕೇದಾರಘಾಟ್ನಲ್ಲಿ ಜಲಸಮಾಧಿ ಮಾಡಲಾಯಿತು. ಏಪ್ರಿಲ್ 29 ರಂದು ಅವರ ಷೋಡಶಿಯಂದು ಭಂಡಾರ, ಶ್ರದ್ಧಾಂಜಲಿ ಸಮಾರಂಭ ಮತ್ತು ಸಂತರ ಸಮಾಗಮವನ್ನು ಆಯೋಜಿಸಲಾಗಿದೆ. ದೇಶದೆಲ್ಲೆಡೆಯಿಂದ ಸಂತರು, ಮಹಾಂತರು, ಮಹಾಮಂಡಲೇಶ್ವರರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಇದನ್ನೂ ಓದಿ: ಝೀಲಂ ನದಿಯಲ್ಲಿ ಮಗುಚಿದ ಪ್ರಯಾಣಿಕರಿದ್ದ ದೋಣಿ: ಹಲವರು ನೀರು ಪಾಲಾಗಿರುವ ಶಂಕೆ