ಚೆನ್ನೈ (ತಮಿಳುನಾಡು): ಆಕೆಗೆ 22, ಈತನಿಗೆ 17 ವರ್ಷ. ಇಬ್ಬರ ನಡುವೆ 5 ವರ್ಷಗಳ ಅಂತರವಿದ್ದರೂ, ಬಾಲಕನಿಗೆ ಮಾತ್ರ ಯುವತಿ ಮೇಲೆ ಪ್ರೇಮಾಂಕುರವಾಗಿತ್ತು. ಯುವತಿಯನ್ನು ವರಿಸಲು ಆತ ಇನ್ನಿಲ್ಲದ ಯತ್ನ ಮಾಡಿದ್ದಾನೆ. ಅದ್ಯಾವಾಗ ಆಕೆ ಸಿಗುವುದಿಲ್ಲ ಅಂತ ಗೊತ್ತಾಗಿ, ಪ್ರೀತಿ ವೈರತ್ವವಾಗಿ ಬೆಳೆದು "ಆನ್ಲೈನ್" ಕಿರುಕುಳ ನೀಡಲು ಆರಂಭಿಸಿದ್ದಾನೆ.
ಈ ಬಗ್ಗೆ ಪೋಷಕರು ಬಾಲಕನ ವಿರುದ್ಧ ದೂರು ನೀಡಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಬಳಿಕ ಬುದ್ಧಿವಾದ ಹೇಳಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಆತ ನೀಡಿದ ಕಿರುಕುಳದಿಂದ ಮಾತ್ರ ಯುವತಿ ಬೇಸ್ತು ಬಿದ್ದಿದ್ದಾಳೆ. ಹಲವು ಬಾರಿ ಆಕೆ ಮುಜುಗುರಕ್ಕೆ ಒಳಗಾಗಬೇಕಾಗಿ ಬಂದಿದೆ.
ಪ್ರಕರಣದ ವಿವರ: ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು ತನ್ನ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಳು. ಈ ವೇಳೆ ಈ ಬಾಲಕನೂ ಕೂಡ ಟ್ಯೂಷನ್ಗೆ ಬರುತ್ತಿದ್ದ. ಈ ವೇಳೆ ಟೀಚರ್ ಎನ್ನುತ್ತಲೇ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದಾನೆ. ಈ ಬಗ್ಗೆ ಆಕೆಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆಕೆ ಇದನ್ನು ನಿರಾಕರಿಸಿದ್ದಾಳೆ. ಬಳಿಕ ಆಕೆಯ ಪೋಷಕರಲ್ಲಿ 'ವಧು' ಕೇಳಿದ್ದಾನೆ. ಇದನ್ನು ಅವರು ವಿರೋಧಿಸಿದ್ದಾರೆ.
ಬಳಿಕ ಯುವತಿ ಆತನನ್ನು ಟ್ಯೂಷನ್ನಿಂದ ಹೊರಹಾಕಿದ್ದಾಳೆ. ಇದರಿಂದ ಸಿಟ್ಟಾದ ಬಾಲಕ ಆಕೆಯನ್ನು ಹೇಗಾದರೂ ಮಾಡಿ ಪಡೆಯಬೇಕು ಎಂದು ನಾನಾ ಪ್ರಯತ್ನ ಮಾಡಿದ್ದಾನೆ. ಸಿಗದಿದ್ದಾಗ, ಕಿರುಕುಳ ನೀಡಲು ಆರಂಭಿಸಿದ್ದಾನೆ.
ಆನ್ಲೈನ್ ಆರ್ಡರ್ಗಳ ಟಾರ್ಚರ್: ಯುವತಿಯನ್ನು ಪೀಡಿಸಲು ಆತ ಅನುಸರಿಸಿದ ಹಾದಿ ವಿಚಿತ್ರವಾಗಿದೆ. ಅದೇನೆಂದರೆ, ಯುವತಿಯ ಮನೆ ಪಕ್ಕದ ನಿವಾಸಿಯಾಗಿದ್ದರಿಂದ ತನ್ನ ಮೊಬೈಲ್ನಿಂದ ಆನ್ಲೈನ್ ಮೂಲಕ ಆರ್ಡರ್ಗಳನ್ನು ಮಾಡಿ ಅದನ್ನು ಆಕೆಯ ಮನೆ ವಿಳಾಸಕ್ಕೆ ಕಳುಹಿಸುತ್ತಿದ್ದ. ಡೆಲಿವೆರಿ ನೀಡಲು ಬಂದಾಗ ಅದನ್ನು ತಾನು ಆರ್ಡರ್ ಮಾಡಿಲ್ಲ ಎಂದು ಯುವತಿ ವಾಪಸ್ ಕಳುಹಿಸುತ್ತಿದ್ದಳು.
ಇದೇ ರೀತಿ 'ಕ್ಯಾಶ್ ಆನ್ ಡೆಲಿವರಿ' ಮೂಲಕ ಈವರೆಗೂ ನೂರಾರು ಆರ್ಡರ್ಗಳನ್ನು ಯುವತಿಗೆ ಕಳುಹಿಸಿದ್ದಾನೆ. ಅಮೆಜಾನ್, ಫ್ಲಿಪ್ಕಾರ್ಟ್, ಸ್ವಿಗ್ಗಿ ಮುಂತಾದ ಆನ್ಲೈನ್ ಆ್ಯಪ್ಗಳು, ಓಲಾ ಮತ್ತು ಉಬರ್ನಲ್ಲಿ ವಾಹನ ಬುಕ್ ಮಾಡಿ ಮಹಿಳೆಯ ಮನೆಗೆ ಕಳುಹಿಸಿದ್ದಾನೆ. ಯುವತಿ ಇದೆಲ್ಲವನ್ನೂ ಕ್ಯಾನ್ಸಲ್ ಮಾಡಿ ಸುಸ್ತಾಗಿದ್ದಾಳೆ.
ಬಳಿಕ ಯುವತಿಯ ಪೋಷಕರು ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅನಾಮಿಕ ವ್ಯಕ್ತಿಯೊಬ್ಬ ತಮ್ಮ ಪುತ್ರಿಗೆ ಆನ್ಲೈನ್ ಆರ್ಡರ್ ಮಾಡಿ ಕಿರುಕುಳ ನೀಡುತ್ತಿದ್ದಾನೆ. ತಮ್ಮ ಮನೆಗೆ ದಿನಕ್ಕೊಂದು ವಸ್ತು ಬರುತ್ತಿದೆ. ಇದನ್ನು ತಾವು ಆರ್ಡರ್ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು, ಆರ್ಡರ್ ಮಾಡಿದ ಮೊಬೈಲ್ ಸಂಖ್ಯೆಯನ್ನು ಪತ್ತೆ ಮಾಡಿದಾಗ, ಅದು ಯುವತಿಯ ಪಾಗಲ್ಪ್ರೇಮಿ ಬಾಲಕ ಎಂಬುದು ಗೊತ್ತಾಗಿದೆ. ಬಳಿಕ ಆತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಎಲ್ಲವನ್ನೂ ತಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಬುದ್ಧಿವಾದ ಹೇಳಿದ ಬಳಿಕ ಜಾಮೀನಿನ ಮೇಲೆ ಸದ್ಯ ಆತನನ್ನು ಬಿಡುಗಡೆ ಮಾಡಲಾಗಿದೆ. ಆತನಿಂದ ಕಿರುಕುಳಕ್ಕೆ ಬಳಸಿದ ಎರಡು ಮೊಬೈಲ್, ವೈ-ಫೈ ರೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.