ನವದೆಹಲಿ: ಇತ್ತೀಚೆಗೆ ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಮೊದಲ ಚುನಾವಣಾ ಗೆಲುವು ಸಾಧಿಸಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ದೆಹಲಿ, ಗುಜರಾತ್, ಗೋವಾ ಮತ್ತು ಹರಿಯಾಣದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ.
ಶನಿವಾರ ಎರಡೂ ಪಕ್ಷಗಳ ನಾಯಕರು ದೆಹಲಿಯ ಕಾನ್ ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಹಂಚಿಕೊಂಡರು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒಟ್ಟಿಗೆ ಇದ್ದರೆ, ಪಂಜಾಬ್‌ನಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸಲಿವೆ.
ದೆಹಲಿಯಲ್ಲಿ ಸೀಟು ಹಂಚಿಕೆ: ಇಂಡಿಯಾ ಒಕ್ಕೂಟದ ಸದಸ್ಯರು ದೆಹಲಿಯ ಏಳು ಸ್ಥಾನಗಳಲ್ಲಿ ನಾಲ್ಕು (ಎಎಪಿ)- ಮೂರು (ಕಾಂಗ್ರೆಸ್) ಸೀಟು ಹಂಚಿಕೆ ಮಾಡಲಾಗಿದೆ. ಎಎಪಿ ನವದೆಹಲಿಯ ಜೊತೆಗೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದೆಹಲಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆದರೆ, ಕಾಂಗ್ರೆಸ್ ವಾಯವ್ಯ ಮತ್ತು ಈಶಾನ್ಯ ದೆಹಲಿ ಮತ್ತು ಚಾಂಡಿ ಚೌಕ್‌ನಿಂದ ಸ್ಪರ್ಧಿಸಲಿದೆ ಎಂದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಹೇಳಿದ್ದಾರೆ.
ಉಭಯ ಪಕ್ಷಗಳ ನಡುವೆ ಒಪ್ಪಂದ: ಎರಡೂ ಪಕ್ಷಗಳ ಹಿರಿಯ ನಾಯಕರು ಜಂಟಿಯಾಗಿ ದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ಸೀಟು ಹಂಚಿಕೆ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ದೆಹಲಿ, ಗುಜರಾತ್, ಹರಿಯಾಣ, ಚಂಡೀಗಢ ಮತ್ತು ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿಯಡಿ ಚುನಾವಣೆ ಎದುರಿಸಲಿವೆ. ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಮತ್ತು ಆಮ್ ಆದ್ಮಿ ಪಕ್ಷವು ಪ್ರತಿ ರಾಜ್ಯದಲ್ಲಿ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎಂಬ ಬಗ್ಗೆ ಉಭಯ ಪಕ್ಷಗಳ ನಡುವೆ ಒಪ್ಪಂದವಾಗಿದ್ದು, ಅಧಿಕೃತ ಹೇಳಿಕೆ ಮಾತ್ರ ಬಾಕಿ ಉಳಿದಿದೆ.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್, ದೆಹಲಿ ಸರ್ಕಾರದ ಸಚಿವ ಸೌರಭ್ ಭಾರದ್ವಾಜ್ ಮತ್ತು ಅತಿಶಿ ಆಮ್ ಆದ್ಮಿ ಪಕ್ಷದ ಪರವಾಗಿ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಉಪಸ್ಥಿತರಿದ್ದರು. ಮೈತ್ರಿಗಾಗಿ ಕಾಂಗ್ರೆಸ್ ರಚಿಸಿರುವ ಸಮಿತಿಯ ಅಧ್ಯಕ್ಷ ಮುಕುಲ್ ವಾಸ್ನಿಕ್, ದೆಹಲಿ ರಾಜ್ಯಾಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಮತ್ತು ಪಕ್ಷದ ದೆಹಲಿ - ಹರಿಯಾಣ ಉಸ್ತುವಾರಿ ದೀಪಕ್ ಬಬಾರಿಯಾ ಸಹ ಭಾಗವಹಿಸಿದ್ದರು.
ಇತರ ರಾಜ್ಯಗಳ ಸೀಟು ಹಂಚಿಕೆ ಘೋಷಣೆ: ಪಂಜಾಬ್‌ನಲ್ಲಿ ಎರಡೂ ಪಕ್ಷಗಳು ಎಲ್ಲಾ 13 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಅಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಇದಲ್ಲದೇ ಗುಜರಾತ್‌ನ ಭರೂಚ್ ಮತ್ತು ಭಾವನಗರದ ಎರಡು ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದ್ದು, ಉಳಿದ 24 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಜೊತೆಗೆ ಹರಿಯಾಣದಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಮತ್ತು ಆಮ್ ಆದ್ಮಿ ಪಕ್ಷ ಒಂದು ಸ್ಥಾನದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದೆ. ಮತ್ತೊಂದೆಡೆ, ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಗೋವಾದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.
''ದೇಶದಲ್ಲಿ ಚುನಾವಣೆ ಅಕ್ರಮ ನಡೆಯುತ್ತಿದೆ. ಚುನಾವಣೆ ಗೆಲ್ಲಲು ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಇಡೀ ದೇಶದ ಜನರು ನಿರುದ್ಯೋಗ ಮತ್ತು ಹಣದುಬ್ಬರದಿಂದ ಹೋರಾಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು ಮೈತ್ರಿ ಮಾಡಿಕೊಂಡಿದ್ದು, ನಮಗೆ ದೇಶ ಮುಖ್ಯವಾಗಿದೆ. ಪಕ್ಷ ಯಾವಾಗಲೂ ಎರಡನೇ ಸ್ಥಾನದಲ್ಲಿದೆ. 'ಇಂಡಿಯಾ' ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಎಎಪಿ ನಾಯಕ ಸಂದೀಪ್ ಪಾಠಕ್ ಹೇಳಿದರು.
''ಎಎಪಿ ಮತ್ತು ಕಾಂಗ್ರೆಸ್ ನಡುವೆ ಸೀಟುಗಳ ಒಪ್ಪಂದ ನಡೆದಿದೆ. ಮುಂಬರುವ ಲೋಕಸಭೆ ಚುನಾವಣೆಯ ಉಸ್ತುವಾರಿಯನ್ನು ಎರಡು ಪ್ರಮುಖ ರಾಜಕೀಯ ಪಕ್ಷಗಳು ವಹಿಸಿಕೊಳ್ಳಲಿವೆ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು 'ಇಂಡಿಯಾ' ಮೈತ್ರಿಕೂಟ ಶಕ್ತಿಯುತವಾಗಿ ಕೆಲಸ ಮಾಡುತ್ತದೆ. ಬೇರೆ ಬೇರೆ ಚಿಹ್ನೆಗಳ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತೇವೆ. ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಪೂರ್ಣ ಶಕ್ತಿಯಿಂದ ಕೆಲಸ ಮಾಡುತ್ತಾರೆ'' ಎಂದು ಹಿರಿಯ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ತಿಳಿಸಿದರು.
ಇದನ್ನೂ ಓದಿ: ಪ್ಯಾರಾಚೂಟ್ ಸಾಹಸ: ಸೀರೆಯುಟ್ಟು 5,000 ಅಡಿ ಎತ್ತರದಿಂದ ಜಿಗಿದ ಪದ್ಮಶ್ರೀ ಪುರಸ್ಕೃತೆ