ಉನ್ನಾವೊ (ಉತ್ತರ ಪ್ರದೇಶ): ಭ್ರಷ್ಟಾಚಾರಿಗಳಿಗೆ ತಮ್ಮ ಕರ್ತವ್ಯಕ್ಕಿಂತ ಹಣವೇ ಹೆಚ್ಚಾಗಿರುತ್ತೆ. ಸಂತ್ರಸ್ತರ ಪಾಡು ಏನಾದರೂ ಆಗಲಿ ತಮಗೆ ಹಣ ಬಂದರೆ ಸಾಕು ಎಂದು ಲಜ್ಜೆ ಬಿಟ್ಟು ನಿಂತಿರುತ್ತಾರೆ. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಗಂಗಾ ನದಿಯಲ್ಲಿ ಮುಳುಗಿದ ಅಧಿಕಾರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಅಧಿಕಾರಿ ಪತ್ತೆಯಾಗಿಲ್ಲ. ವಿಚಿತ್ರವೆಂದರೆ, ಅಧಿಕಾರಿ ನೀರಿನಲ್ಲಿ ಮುಳುಗುತ್ತಿದ್ದಾಗ ಉಳಿಸಲು ಅಲ್ಲಿಯೇ ಇದ್ದ ಬೋಟ್ಮ್ಯಾನ್ಗೆ ಕೇಳಿಕೊಂಡಾಗ ಆತ 10 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ. ಹಣ ನೀಡಿದರೆ ಮಾತ್ರ ರಕ್ಷಣೆ ಮಾಡುವುದಾಗಿ ಕರಾರು ಹಾಕಿದ್ದ. ಪಾವತಿ ಮಾಡುವಷ್ಟರಲ್ಲಿ ಅಧಿಕಾರಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದಾರೆ.
ಈ ಸಂಗತಿಯನ್ನು ಅಧಿಕಾರಿಯ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಹಣ ಪಡೆದುಕೊಂಡ ಬೋಟ್ಮ್ಯಾನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಬೋಟ್ಮ್ಯಾನ್ ತಕ್ಷಣಕ್ಕೆ ನೆರವು ನೀಡಿದ್ದರೆ, ಅಧಿಕಾರಿಯನ್ನು ಉಳಿಸಬಹುದಾಗಿತ್ತು ಎಂದು ಸ್ನೇಹಿತರು ಹೇಳಿದ್ದಾರೆ.
ಅಂದು ಏನಾಯ್ತು?: ಆರೋಗ್ಯ ಇಲಾಖೆಯ ಉಪನಿರ್ದೇಶಕರಾಗಿದ್ದ ಆದಿತ್ಯ ವರ್ಧನ್ ಗೌರವ್ ಅವರು ಇತರ ಮೂವರು ಸ್ನೇಹಿತರೊಂದಿಗೆ ಗಂಗಾ ಸ್ನಾನ ಮಾಡಲು ಉನ್ನಾವೋ ಜಿಲ್ಲೆಯ ನಾನಮೌ ಘಾಟ್‌ಗೆ ಭೇಟಿ ನೀಡಿದ್ದರು. ಸ್ನಾನ ಮಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಕ್ಕು ಅಧಿಕಾರಿ ಗೌರವ್ ಕೊಚ್ಚಿಕೊಂಡು ಹೋಗಿದ್ದಾನೆ. ಈ ವೇಳೆ ಎರಡೂ ಕೈಗಳನ್ನು ಮೇಲೆತ್ತಿಕೊಂಡು ರಕ್ಷಿಸಲು ಕೋರುತ್ತಿದ್ದುದು ಕಂಡು ಬಂತು.
ಜೊತೆಗಿದ್ದ ಸ್ನೇಹಿತರು ಉಳಿಸಲು ಯತ್ನಿಸಿದರೂ ಸಿಗದಿದ್ದಾಗ, ದಡದಲ್ಲಿದ್ದ ಬೋಟ್ಮ್ಯಾನ್ ನೆರವು ಕೇಳಿದ್ದಾರೆ. ಆದರೆ, ಆತ 10 ಸಾವಿರ ರೂಪಾಯಿ ಬ್ಯಾಂಕ್ ಖಾತೆಗೆ ರವಾನಿಸುವಂತೆ ಕೇಳಿದ್ದಾನೆ. ಸ್ನೇಹಿತರು ತಕ್ಷಣವೇ ಹಣ ವರ್ಗಾಯಿಸಿದ್ದಾರೆ. ಆದರೆ, ಅಷ್ಟರೊಳಗೆ ಅಧಿಕಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬೋಟ್ಮ್ಯಾನ್ ಕೆಲ ಹೊತ್ತು ಹುಡುಕಾಡಿ ವಾಪಸ್ ಬಂದಿದ್ದ. ಬಳಿಕ ಬೋಟ್ ಅನ್ನು ದಡದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ: ನೀರಿನಲ್ಲಿ ಕೊಚ್ಚಿಹೋದ ಅಧಿಕಾರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ, ಮುಳುಗು ತಜ್ಞರು ರಕ್ಷಣಾ ತಂಡದಲ್ಲಿದ್ದಾರೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಅಧಿಕಾರಿಗಳು ಸೇರಿದಂತೆ 75 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 30 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ. 48 ಗಂಟೆಗಳ ಕಾರ್ಯಾಚರಣೆ ನಂತರವೂ ಉಪನಿರ್ದೇಶಕ ಪತ್ತೆಯಾಗಿಲ್ಲ.
ನೀರಲ್ಲಿ ಮುಳುಗಿದ ಅಧಿಕಾರಿ ಕುಟುಂಬಸ್ಥರು ಉನ್ನತ ಹುದ್ದೆಯಲ್ಲಿದ್ದಾರೆ. ಮೃತ ಅಧಿಕಾರಿಯ ಪತ್ನಿ ನ್ಯಾಯಾಧೀಶರಾಗಿದ್ದಾರೆ. ಸೋದರ ಸಂಬಂಧಿ ಐಎಎಸ್ ಅಧಿಕಾರಿ, ಸಹೋದರಿ ಆಸ್ಟ್ರೇಲಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಇದನ್ನೂ ಓದಿ: ತೆಲಂಗಾಣ, ಆಂಧ್ರದಲ್ಲಿ ಮಳೆ ಆರ್ಭಟ; ಒಂದೇ ದಿನ 10 ಮಂದಿ ಸಾವು - Telangana Andhra Pradesh Heavy Rain