ನವದೆಹಲಿ: ದೇಶದ ಸರ್ವೋಚ್ಛ ನ್ಯಾಯಾಲಯವು ಜನಸ್ನೇಹಿ ವ್ಯವಸ್ಥೆಗೆ ಮತ್ತು ಡಿಜಿಟಲೀಕರಣಕ್ಕೆ ಅಣಿಯಾಗಿದೆ. ಇನ್ಮುಂದೆ ವ್ಯಾಜ್ಯಗಳ ಪಟ್ಟಿ, ಪ್ರಕರಣಗಳ ದಾಖಲಾತಿ ಮತ್ತು ಅವುಗಳ ವಿಚಾರಣೆಯ ಪಟ್ಟಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ವಕೀಲರೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಗುರುವಾರ ಪ್ರಕಟಿಸಿದ್ದಾರೆ.
ರಾಜ್ಯ ನೀತಿಯ ನಿರ್ದೇಶನ ತತ್ವಗಳಡಿ ಬರುವ ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು ಸಮುದಾಯದ ವಸ್ತು ಸಂಪನ್ಮೂಲಗಳು ಎಂದು ಪರಿಗಣಿಸಬಹುದೇ ಎಂಬ ಅರ್ಜಿಗಳಿಂದ ಉದ್ಭವಿಸಿದ ಕಾನೂನು ಪ್ರಶ್ನೆಯ ಬಗ್ಗೆ ಇಂದು ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತು. ಇದರ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನ ಈ ಪೀಠದ ನೇತೃತ್ವದ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ವಾಟ್ಸ್‌ಆ್ಯಪ್ ವ್ಯವಸ್ಥೆ ಬಗೆಗಿನ ಘೋಷಣೆ ಮಾಡಿದರು.
ಮೊಬೈಲ್ ಫೋನ್‌ಗೆ ವ್ಯಾಜ್ಯಗಳ ಪಟ್ಟಿ: ''75ನೇ ವರ್ಷಾಚರಣೆಯಲ್ಲಿರುವ ಸುಪ್ರೀಂ ಕೋರ್ಟ್ ತನ್ನ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸೇವೆಗಳೊಂದಿಗೆ ವಾಟ್ಸ್‌ಆ್ಯಪ್ ಸಂದೇಶಗಳನ್ನು ಸಂಯೋಜಿಸುವ ಮೂಲಕ ನ್ಯಾಯದ ಪ್ರವೇಶವನ್ನು ಬಲಪಡಿಸುವ ಉಪಕ್ರಮವನ್ನು ಪ್ರಾರಂಭಿಸಲಾಗುತ್ತದೆ. ಇದರಿಂದ ಈಗ ವಕೀಲರು ಪ್ರಕರಣಗಳನ್ನು ದಾಖಲಿಸುವ ಕುರಿತು ಸ್ವಯಂಚಾಲಿತ ಸಂದೇಶಗಳನ್ನು ಸ್ವೀಕರಿಸುತ್ತಾರೆ. ಬಾರ್‌ನ ಸದಸ್ಯರು ವ್ಯಾಜ್ಯಗಳ ಪಟ್ಟಿಗಳನ್ನೂ ಸಹ ಮೊಬೈಲ್ ಫೋನ್‌ಗಳಲ್ಲಿ ಪಡೆಯಲಿದ್ದಾರೆ'' ಎಂದು ಸಿಜೆಐ ತಿಳಿಸಿದರು.
ಕ್ರಾಂತಿಕಾರಿ ಹೆಜ್ಜೆ-ಮೆಹ್ತಾ: ವ್ಯಾಜ್ಯಗಳ ಪಟ್ಟಿ (Cause List) ಎಂದರೆ, ನಿರ್ದಿಷ್ಟ ದಿನದಂದು ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಪ್ರಕರಣಗಳ ಮಾಹಿತಿ. ವಾಟ್ಸ್‌ಆ್ಯಪ್ ಸಂದೇಶ ವ್ಯವಸ್ಥೆ ಬಗ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ''ಇದು ಮತ್ತೊಂದು ಕ್ರಾಂತಿಕಾರಿ ಹೆಜ್ಜೆ'' ಎಂದು ಬಣ್ಣಿಸಿದರು. ಇದೇ ವೇಳೆ, ಉನ್ನತ ನ್ಯಾಯಾಲಯದ ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಹಂಚಿಕೊಂಡ ಸಿಜೆಐ, ''ಸಂದೇಶಗಳ ಮೂಲಕ ವಕೀಲರೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುವುದು. ಆದರೆ, ಯಾವುದೇ ಸಂದೇಶಗಳು ಮತ್ತು ಕರೆಗಳನ್ನು ಸ್ವೀಕರಿಸಲಾಗುವುದು'' ಎಂದು ತಿಳಿಸಿದರು. ಮುಂದೆವರೆದು, ''ಇದು ನಮ್ಮ ಕಾರ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ'' ಎಂದರು.
ಇ-ಕೋರ್ಟ್ ಯೋಜನೆ: ಸುಪ್ರೀಂ ಕೋರ್ಟ್ ನ್ಯಾಯಾಂಗದ ಕಾರ್ಯಚಟುವಟಿಕೆಯನ್ನು ಡಿಜಿಟಲೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಸಿಜೆಐ ಚಂದ್ರಚೂಡ್, ''ಇ-ಕೋರ್ಟ್ ಯೋಜನೆಗೆ ಕೇಂದ್ರ 7 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ'' ಎಂದು ಮಾಹಿತಿ ನೀಡಿದರು. ಸಾಲಿಸಿಟರ್ ಜನರಲ್ ಮೆಹ್ತಾ, ''ಕೇಂದ್ರ ಸರ್ಕಾರವು ಸಾಮಾನ್ಯ ದಾವೆದಾರರು ಮತ್ತು ವಕೀಲರ ಪ್ರವೇಶವನ್ನು ಹೆಚ್ಚಿಸಲು ನ್ಯಾಯಾಂಗದ ಡಿಜಿಟಲೀಕರಣಕ್ಕೆ ಬದ್ಧವಾಗಿದೆ'' ಎಂದು ಹೇಳಿದರು.
ಇದನ್ನೂ ಓದಿ: ಮೋದಿ, ಖರ್ಗೆ, ರಾಹುಲ್ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಬಿಜೆಪಿ, ಕಾಂಗ್ರೆಸ್ ಪ್ರತಿಕ್ರಿಯೆ ಕೇಳಿದ ಚು.ಆಯೋಗ