ನವದೆಹಲಿ: ಹಿಂದು ದೇವಾಲಯ ಎಂದು ಹೇಳಲಾಗುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಂ ಪಕ್ಷದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದರ ಅರ್ಜಿಯ ವಿಚಾರಣೆ ಏಪ್ರಿಲ್ 1 ರಂದು ನಡೆಯಲಿದೆ.
ಜ್ಞಾನವಾಪಿ ಮಸೀದಿಯಲ್ಲಿ ಹಿಂದುಗಳು ಮಾಡುತ್ತಿರುವ ಪೂಜೆಯು ನಿಯಮಾನುಸಾರವಾಗಿದೆ ಎಂದು ಫೆಬ್ರವರಿ 26 ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಹಿಂದೂಗಳಿಗೆ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಲಯದ ಜನವರಿ 31ರ ಆದೇಶವನ್ನು ಎತ್ತಿಹಿಡಿದು, ಅದನ್ನು ಪ್ರಶ್ನಿಸಿದ ಮನವಿಯನ್ನು ವಜಾಗೊಳಿಸಿತ್ತು. ಇದರ ವಿರುದ್ಧ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಯು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮಸೀದಿ ಪಕ್ಷದವರು ಸಲ್ಲಿಸಿದ ಅರ್ಜಿಯನ್ನು ಏಪ್ರಿಲ್ 1 ರಂದು ವಿಚಾರಣೆ ಮಾಡಲು ಒಪ್ಪಿಗೆ ಸೂಚಿಸಿದೆ.
ಹೈಕೋರ್ಟ್ ತೀರ್ಪಲ್ಲೇನಿತ್ತು?: ಫೆಬ್ರವರಿ 26 ರಂದು ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸುವ ಮುನ್ನ, ಜ್ಞಾನವಾಪಿ ಮಸೀದಿಯಲ್ಲಿ 1993 ಕ್ಕೂ ಮೊದಲು ಪೂಜೆ ನಡೆಯುತ್ತಿತ್ತು. ಉತ್ತರ ಪ್ರದೇಶದ ಅಂದಿನ ಸರ್ಕಾರವು ಮೌಖಿಕ ಸೂಚನೆಯ ಮೇರೆಗೆ ವ್ಯಾಸ್ ತೆಹಖಾನಾದಲ್ಲಿ ಪೂಜಾ ವಿಧಿಗಳನ್ನು ನಿಲ್ಲಿಸಲಾಗಿದೆ. ಲಿಖಿತ ಆದೇಶವಿಲ್ಲದೆ ಕಾನೂನುಬಾಹಿರವಾಗಿ ಪೂಜಾ ವಿಧಿಗಳನ್ನು ತಡೆಯಲಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಜನವರಿ 17 ರ ಆದೇಶದಂತೆ ಅಲ್ಲಿ ಪೂಜೆ ಮುಂದುವರಿಸಬಹುದು. ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಇದು ಸಾಗಬಹುದು ಎಂದು ಆದೇಶಿಸಿತ್ತು.
ಇನ್ನು, ನ್ಯಾಯಾಲಯದ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಿದ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿ ಹಿಂದೆ ಕಾಶಿ ವಿಶ್ವನಾಥ ದೇಸ್ಥಾನದ ಭಾಗ ಎಂಬುದಕ್ಕೆ ನೂರಾರು ಸಾಕ್ಷ್ಯಗಳಿವೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿ, ಅಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ.
ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಹಿಂದೂ ಅರ್ಚಕರು ಈಗ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಮುಖ್ಯ ಅರ್ಜಿದಾರರಾದ ಶೈಲೇಂದ್ರ ಕುಮಾರ್ ಪಾಠಕ್ ಅವರು ತಮ್ಮ ಅಜ್ಜ ಸೋಮನಾಥ ವ್ಯಾಸ್ ಅವರು ಇಲ್ಲಿ ಅರ್ಚಕರಾಗಿದ್ದರು. 1993ರ ವರೆಗೆ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. 1992 ರಂದು ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಅಧಿಕಾರಾವಧಿಯಲ್ಲಿ ಪೂಜೆಯನ್ನು ತಡೆಯಲಾಗಿತ್ತು ಎಂದು ವಾದಿಸಿದ್ದರು.
ಇದನ್ನೂ ಓದಿ: ಜ್ಞಾನವಾಪಿ: ಹಿಂದೂಗಳು ಪೂಜಿಸುತ್ತಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶದ ದುರಸ್ತಿ, ರಕ್ಷಣೆ ಕೋರಿ ಕೋರ್ಟ್ಗೆ ಅರ್ಜಿ