ನವದೆಹಲಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ನೀಡಲಾದ ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿತು. ಇದೇ ವೇಳೆ, ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ಕುರಿತು ಭವಾನಿ ರೇವಣ್ಣರಿಗೆ ನೋಟಿಸ್ ಜಾರಿ ಮಾಡಿತು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಆರೋಪ ಸಂಬಂಧ ಭವಾನಿ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಜೂನ್ 18ರಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಇಂದು ನಡೆಸಿತು. ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಜರಾಗಿದ್ದರು.
ಈ ವೇಳೆ, ನ್ಯಾಯಪೀಠವು, ''ಆರೋಪಿ 55 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಆಕೆಯ ಮಗನ ವಿರುದ್ಧ ಅಮಾನುಷ ಕೃತ್ಯಗಳಲ್ಲಿ ತೊಡಗಿರುವ ಗಂಭೀರ ಆರೋಪಗಳಿವೆ. ಆತ ಓಡಿಹೋಗಿ ಕೊನೆಗೆ ಸಿಕ್ಕಿಬಿದ್ದಿದ್ದಾನೆ. ಈ ರೀತಿಯ ಆರೋಪಗಳ ಸಂದರ್ಭದಲ್ಲಿ ತನ್ನ ಮಗ ಮಾಡಿದ ಅಪರಾಧಕ್ಕೆ ಕುಮ್ಮಕ್ಕು ನೀಡುವಲ್ಲಿ ತಾಯಿಯ ಪಾತ್ರವೇನು'' ಎಂದು ಸಿಬಲ್ ಅವರನ್ನು ಪ್ರಶ್ನಿಸಿತು.
ಇದಕ್ಕೆ ಸಿಬಲ್, ''ಈ ಕುಟುಂಬದ ನಿರ್ದೇಶನದ ಮೇರೆಗೆ ಸಂತ್ರಸ್ತೆಯನ್ನು ಅಪಹರಿಸಿ ಸೆರೆಯಲ್ಲಿ ಇರಿಸಲಾಗಿತ್ತು. ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು ಅತ್ಯಂತ ದುರದೃಷ್ಟಕರ'' ಎಂದು ತಮ್ಮ ವಾದ ಮಂಡಿಸಿದರು. ಇದಕ್ಕೆ ನ್ಯಾಯಪೀಠ, ''ಹಾಗೇನಿಲ್ಲ, ನಾವು ಈ ವಿಷಯವನ್ನು ರಾಜಕೀಯಗೊಳಿಸುವುದು ಬೇಡ'' ಎಂದು ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸಿದ 42ನೇ ಎಸಿಎಂಎಂ ನ್ಯಾಯಾಲಯ