ರೋಹ್ಟಕ್ (ಹರಿಯಾಣ): ರೋಹ್ಟಕ್ ಜಿಲ್ಲೆಯ ಸಾಕ್ಷಿ ನರ್ವಾಲ್ ಸಿಡಿಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (2) 2023 (Combined Defence Services Examination) ರಲ್ಲಿ ಸಾಕ್ಷಿ ಅವರು ಅಖಿಲ ಭಾರತ ಮಟ್ಟದಲ್ಲಿ ಮೊದಲ ಶ್ರೇಣಿ ಪಡೆದಿದ್ದಾರೆ. ಸಾಕ್ಷಿ ನರ್ವಾಲ್ ಪ್ರಸ್ತುತ ಮೊಹಾಲಿಯ ಸೇನಾ ಕಾನೂನು ಸಂಸ್ಥೆಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.
ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಲಿಖಿತ ಪರೀಕ್ಷೆಯ ಬಳಿಕ, ಸೇವಾ ಆಯ್ಕೆ ಮಂಡಳಿಯು 5 ದಿನಗಳ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅಕ್ಟೋಬರ್ ತಿಂಗಳಿನಲ್ಲಿ ಚೆನ್ನೈನಲ್ಲಿರುವ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ 49 ವಾರಗಳ ಸೇನಾ ತರಬೇತಿಯನ್ನು ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಂಡ ನಂತರ, ಸಾಕ್ಷಿ ನರ್ವಾಲ್ ಅವರನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಿಸಲಾಗುತ್ತದೆ.
ಸಾಕ್ಷಿ ನರ್ವಾಲ್ ಅವರು ತಮ್ಮ ಕುಟುಂಬದ ಮೂರನೇ ತಲೆಮಾರಿನ ಅಧಿಕಾರಿಯಾಗಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅವರ ತಂದೆ ಪ್ರತಿಷ್ಠಿತ ಶಾಲೆಯ ನಿರ್ದೇಶಕರಾಗಿದ್ದಾರೆ. ಸಾಕ್ಷಿ ನರ್ವಾಲ್ ಅವರ ತಾಯಿ ಸೀಮಾ ನರ್ವಾಲ್ ವಿದ್ಯಾರ್ಥಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಶಿಕ್ಷಣದ ಸಮಯದಲ್ಲಿ, ಸಾಕ್ಷಿ ಅವರು ಸುಮಾರು 11 ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಜೊತೆಗೆ ವಿವಿಧ ಕ್ರೀಡೆಗಳಲ್ಲೂ ಭಾಗವಹಿಸಿರುವ ಸಾಕ್ಷಿ, ರಾಷ್ಟ್ರಮಟ್ಟದ ಬಿಲ್ಲುಗಾರ್ತಿಯೂ ಹೌದು. ಈಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಳ್ಳಲು ಸಿದ್ಧರಾಗಿದ್ದಾರೆ.
ತಮ್ಮ ಯಶಸ್ಸಿನ ಶ್ರೇಯಸ್ಸನ್ನು ತಂದೆ-ತಾಯಿಗೆ ಅರ್ಪಿಸುವ ಸಾಕ್ಷಿ, "ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಯಾವುದೇ ಗುರಿಯನ್ನೂ ಬೇಕಾದರೂ ಸಾಧಿಸಬಹುದು" ಎಂದು ಹೇಳುತ್ತಾರೆ.
ಇದನ್ನೂ ಓದಿ: PhonePeನಲ್ಲಿ ತಪ್ಪು ಕಂಡುಹಿಡಿದ ಭಾಗಲ್ಪುರದ ಮಯಾಂಕ್: ಕಂಪನಿಯಿಂದ ಹಾಲ್ ಆಫ್ ಫೇಮ್ಗೆ ಆಯ್ಕೆ! - PHONEPE ERROR DETECTION