ಚಂಡೀಗಢ: ಪಂಜಾಬಿನಲ್ಲಿ ರೈತರ ಪ್ರತಿಭಟನೆ ಮೂರನೇ ದಿನವಾದ ಭಾನುವಾರವೂ ಮುಂದುವರಿದಿದೆ. ಈ ಬಗ್ಗೆ ಮಾತನಾಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, "ಯಾವುದೇ ವಿಷಯವಿರಲಿ ಅದು ಅತಿಯಾದರೆ ಒಳ್ಳೆಯದಲ್ಲ, ಸೂಕ್ತ ಕಾರಣಗಳಿಲ್ಲದೆ ಪ್ರತಿದಿನ ರಸ್ತೆಗಳನ್ನು ಬಂದ್ ಮಾಡುವುದು ಸಮರ್ಥನೀಯವಲ್ಲ" ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಏನು ಕಾರಣ?: ನಿಧಾನಗತಿಯಲ್ಲಿ ಭತ್ತ ಖರೀದಿ ಮತ್ತು ರಸಗೊಬ್ಬರಗಳ ಕೊರತೆ ವಿರೋಧಿಸಿ ರಾಜ್ಯದ ಪ್ರಮುಖ ರೈತ ಸಂಘಟನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಮೂರನೇ ದಿನವೂ ರಸ್ತೆಗಳನ್ನು ಬಂದ್ ಮಾಡಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ಇದರಿಂದ ಪ್ರಮುಖ ಹೆದ್ದಾರಿಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ನಾಗರಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಅಕ್ಟೋಬರ್ 26ರಿಂದ ರಾಜ್ಯದ ಅನೇಕ ಕಡೆಗಳಲ್ಲಿ ಅನಿರ್ದಿಷ್ಟಾವಧಿಗೆ ರಸ್ತೆ ತಡೆ ನಡೆಸುವುದಾಗಿ ಸರ್ವನ್ ಸಿಂಗ್ ಪಂಧೇರ್ ನೇತೃತ್ವದ ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿದ್ದು, ಮುಂದಿನ ದಿನಗಳಲ್ಲಿಯೂ ಜನರಿಗೆ ತೀವ್ರ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್) ರಸಗೊಬ್ಬರ ದಾಸ್ತಾನು ಪ್ರಮಾಣವನ್ನು ಶೇಕಡಾ 30ರಷ್ಟು ಕಡಿಮೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರತಿಭಟನಾಕಾರರು ಖಂಡಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಡಿಎಪಿ ಪೂರೈಸುವಂತೆ ಅವರು ಒತ್ತಾಯಿಸುತ್ತಿದ್ದಾರೆ.
ಆಂಬ್ಯುಲೆನ್ಸ್ ಮತ್ತು ಶಾಲಾ ಬಸ್‌ಗಳಂತಹ ತುರ್ತು ಮತ್ತು ಅಗತ್ಯ ಸೇವೆಗಳಿಗೆ ದಿಗ್ಬಂಧನದಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಸಂಗ್ರೂರ್ ಮತ್ತು ಮೊಗಾ ಜಿಲ್ಲೆಗಳಲ್ಲಿ ತಲಾ ಒಂದು ಸ್ಥಳದಲ್ಲಿ ಮತ್ತು ಕಪುರ್ಥಲಾ ಜಿಲ್ಲೆಯ ಫಗ್ವಾರಾ ಮತ್ತು ಗುರುದಾಸ್ ಪುರ ಜಿಲ್ಲೆಯ ಬಟಾಲಾದಲ್ಲಿ ಧರಣಿ ಪ್ರತಿಭಟನೆ ಮುಂದುವರಿಯಲಿವೆ ಎಂದು ಪಂಧೇರ್ ಹೇಳಿದರು.
ನವೆಂಬರ್ 15ರೊಳಗೆ ರಾಜ್ಯಕ್ಕೆ ಹಂಚಿಕೆಯಾದ ಡಿಎಪಿ ರಸಗೊಬ್ಬರವನ್ನು ಸಂಪೂರ್ಣವಾಗಿ ಪೂರೈಸುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಶನಿವಾರ ನವದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರನ್ನು ಒತ್ತಾಯಿಸಿದರು. ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಮುಖ್ಯಮಂತ್ರಿ, ರಾಷ್ಟ್ರೀಯ ಆಹಾರ ಸಂಗ್ರಹಣೆಗಾಗಿ ಗೋಧಿಯ ಪೂರೈಕೆಯಲ್ಲಿ ರಾಜ್ಯವು ಸುಮಾರು 50 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ ಎಂದು ಹೇಳಿದರು. ಗೋಧಿ ಕೃಷಿಗೆ ಡಿಎಪಿ ಮೂಲ ಘಟಕಾಂಶವಾಗಿದ್ದು, ಈ ವರ್ಷ ಗೋಧಿ ಬಿತ್ತನೆಗೆ ರಾಜ್ಯದಲ್ಲಿ 4.80 ಲಕ್ಷ ಮೆಟ್ರಿಕ್ ಟನ್ ಡಿಎಪಿ ಅಗತ್ಯವಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮುಂಬೈ: ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ, 9 ಮಂದಿಗೆ ಗಾಯ, ಇಬ್ಬರು ಗಂಭೀರ