ಕೋಲ್ಕತ್ತಾ: ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ಸೋಮವಾರ ಮುಂಜಾನೆ ರೆಮಲ್ ಚಂಡಮಾರುತ ಅಪ್ಪಳಿಸಿದೆ. ಇನ್ನು ಭಾರಿ ಮಳೆಯಿಂದಾಗಿ ಬಂಗಾಳದಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಚಂಡಮಾರುತದ ಪರಿಣಾಮ ವ್ಯಾಪಕವಾಗಿತ್ತು, ಮರಗಳು ಉರುಳಿ ಬಿದಿವೆ, ನಗರದ ಹೊರವಲಯದಲ್ಲಿ ಮಾತ್ರವಲ್ಲದೇ ನಗರದ ಹೃದಯ ಭಾಗವು ಜಲಾವೃತಗೊಂಡಿತ್ತು. ಭಾನುವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಮೆಟ್ರೋ ನಿಲ್ದಾಣ, ಪಾರ್ಕ್ ಸ್ಟ್ರೀಟ್ ಮತ್ತು ಎಸ್ಪ್ಲಾನೇಡ್ ಮೆಟ್ರೋ ನಿಲ್ದಾಣದಲ್ಲಿ ಜನರು ಮೊಣಕಾಲುದ್ದ ನೀರಿನಲ್ಲಿ ಓಡಾಡುತ್ತಿರುವುದು ಕಂಡುಬಂತು.
ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿ, ಹಳಿಗಳು ಜಲಾವೃತವಾಗಿದ್ದವು. ಆದ್ದರಿಂದ ಮೂರನೇ ಮೆಟ್ರೋ ಮಾರ್ಗಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ ಎಂದು ತಿಳಿಸಿದ್ದಾರೆ. ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ 21 ಗಂಟೆಗಳ ವಿಮಾನ ಹಾರಾಟ ಸ್ಥಗಿತದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಮಾನ ಸೇವೆಗಳು ಪ್ರಾರಂಭವಾಗಿದ್ದರೂ, ಪ್ರತಿಕೂಲ ಹವಾಮಾನದ ಕಾರಣದಿಂದ ಎಂಟು ವಿಮಾನಗಳನ್ನು ಇತರ ನಗರಗಳಿಗೆ ಡೈವರ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಕೋಲ್ಕತಾಗೆ ತೆರಳಬೇಕಿದ್ದ ಎಂಟು ವಿಮಾನಗಳನ್ನು ಗುವಾಹಟಿ, ಗಯಾ, ವಾರಾಣಸಿ ಮತ್ತು ಭುವನೇಶ್ವರ ಸೇರಿದಂತೆ ಇತರ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಬೇಕಾಯಿತು ಎಂದು ಎಎಐ ವಕ್ತಾರರು ತಿಳಿಸಿದ್ದಾರೆ. ನಗರದಿಂದ ಬೆಳಗ್ಗೆ 8.59 ಕ್ಕೆ ಪೋರ್ಟ್ ಬ್ಲೇರ್ ಗೆ ಇಂಡಿಗೊ ವಿಮಾನ ಹಾರಾಟ ಮಾಡಿದೆ. ರೆಮಲ್ ಚಂಡಮಾರುತದಿಂದ ಎದುರಾಗುವ ಅಪಾಯವನ್ನು ನಿರೀಕ್ಷಿಸಿ ಕೋಲ್ಕತ್ತಾ ವಿಮಾನ ನಿಲ್ದಾಣದ ಅಧಿಕಾರಿಗಳು ಭಾನುವಾರ ಮಧ್ಯಾಹ್ನದಿಂದ 21 ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು.
ಕೋಲ್ಕತ್ತಾದ ಹಲವು ಪ್ರದೇಶಗಳು ಇನ್ನೂ ಜಲಾವೃತವಾಗಿದ್ದು, 68 ಕ್ಕೂ ಹೆಚ್ಚು ಮರಗಳು ರಸ್ತೆಯ ಮೇಲೆ ಉರುಳಿವೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರ ನಿವಾಸ ರಾಜಭವನದಲ್ಲಿ ಮರವೊಂದು ಉರುಳಿ ಬಿದ್ದಿದೆ. ಕೋಲ್ಕತಾ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ ಮತ್ತು ಹೂಗ್ಲಿ ಸೇರಿದಂತೆ ದಕ್ಷಿಣ ಬಂಗಾಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ 14 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಲಾಗಿದೆ.
ನಿಗದಿಯಂತೆ ಮೋದಿ ಭೇಟಿ: ಈ ನಡುವೆ ನಾಳೆ(ಮಂಗಳವಾರ) ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಲಿದೆ. ರೋಡ್ ಶೋ ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ರೆಮಲ್ ಚಂಡಮಾರುತದಿಂದ ಕಾರ್ಯಕ್ರಮ ರದ್ದಾಗುತ್ತದೆ ಎಂದು ಪಕ್ಷದ ಮುಖಂಡರು ಆತಂಕಗೊಂಡಿದ್ದರು. ಇನ್ನೂ ಇಲ್ಲಿನ 9 ಲೋಕಸಭಾ ಕ್ಷೇತ್ರಗಳಾದ ಡುಮ್‌ಡಮ್, ಬರಾಸತ್, ಬಸಿರ್‌ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‌ಪುರ, ಕೋಲ್ಕತ್ತಾ ಉತ್ತರ ಮತ್ತು ಕೋಲ್ಕತ್ತಾ ದಕ್ಷಿಣಕ್ಕೆ ಶನಿವಾರ ಕೊನೆಯ ಹಂತದ ಮತದಾನ ನಡೆಯಲಿದೆ.
ಇದನ್ನೂ ಓದಿ: ರೆಮಲ್ ಚಂಡಮಾರುತ ಅಬ್ಬರಕ್ಕೆ ಬಾಂಗ್ಲಾದೇಶ, ಪ.ಬಂಗಾಳ ತತ್ತರ; ಮೆಟ್ರೋ ರೈಲು, ರಸ್ತೆ ಸಂಚಾರ ಅಸ್ತವ್ಯಸ್ತ - Remal Cyclone