ಮುಂಬೈ : ಕೆವೈಸಿ ನವೀಕರಣ ಮಾಡಿಸುವ ನೆಪದಲ್ಲಿ ವಂಚನೆ ಮಾಡುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ಗ್ರಾಹಕರಿಗೆ ಫೋನ್ ಕರೆ, ಎಸ್ಎಂಎಸ್, ಇಮೇಲ್ ಸೇರಿದಂತೆ ಅನಪೇಕ್ಷಿತ ಕರೆಗಳನ್ನು ಮಾಡುವ ಮೂಲಕ ಇಂಥ ವಂಚನೆಗಳನ್ನು ಎಸಗಲಾಗುತ್ತಿದೆ.
ಈ ಮೂಲಕ ವಂಚಕರು ವೈಯಕ್ತಿಕ ಮಾಹಿತಿ, ಖಾತೆ / ಲಾಗಿನ್ ವಿವರಗಳನ್ನು ಬಹಿರಂಗಪಡಿಸುವಂತೆ ಅಥವಾ ಸಂದೇಶಗಳಲ್ಲಿ ಒದಗಿಸಲಾದ ಲಿಂಕ್ಗಳ ಮೂಲಕ ಅನಧಿಕೃತ ಅಥವಾ ವೆರಿಫೈ ಆಗದ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಂತೆ ಚಾಕಚಕ್ಯತೆಯಿಂದ ವರ್ತಿಸುತ್ತಾರೆ ಎಂದು ಆರ್ಬಿಐ ಹೇಳಿದೆ.
ಅಂಥ ಸಂವಹನಗಳ ಸಮಯದಲ್ಲಿ ಸಾಮಾನ್ಯವಾಗಿ ಸುಳ್ಳು ತುರ್ತುಸ್ಥಿತಿಯನ್ನು ಸೃಷ್ಟಿಸುವ ತಂತ್ರಗಳನ್ನು ವಂಚಕರು ಬಳಸುತ್ತಾರೆ ಮತ್ತು ಗ್ರಾಹಕರು ತಾವು ಹೇಳಿದಂತೆ ಮಾಡಲು ವಿಫಲವಾದರೆ ಖಾತೆ ಸ್ಥಗಿತವಾಗಬಹುದು ಅಥವಾ ನಿರ್ಬಂಧಕ್ಕೊಳಗಾಗಬಹುದು ಎಂದು ಬೆದರಿಕೆ ಹಾಕುತ್ತಾರೆ. ಗ್ರಾಹಕರು ಅಗತ್ಯ ವೈಯಕ್ತಿಕ ಅಥವಾ ಲಾಗಿನ್ ವಿವರಗಳನ್ನು ಹಂಚಿಕೊಂಡಾಗ ವಂಚಕರು ಅವರ ಖಾತೆಗಳಿಗೆ ಅನಧಿಕೃತ ಪ್ರವೇಶ ಪಡೆಯುತ್ತಾರೆ ಮತ್ತು ಮೋಸದ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
ಹಣಕಾಸು ಸೈಬರ್ ವಂಚನೆಗಳ ಸಂದರ್ಭದಲ್ಲಿ, ಸಾರ್ವಜನಿಕರು ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಅಥವಾ ಸೈಬರ್ ಕ್ರೈಮ್ ಸಹಾಯವಾಣಿ (1930) ಮೂಲಕ ದೂರು ದಾಖಲಿಸಬೇಕು ಎಂದು ಆರ್ಬಿಐ ಹೇಳಿದೆ. ಇದಲ್ಲದೇ, ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸಾರ್ವಜನಿಕರು ಅಳವಡಿಸಿಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಆರ್ಬಿಐ ಪ್ರಕಟಿಸಿದೆ. ಅವು ಹೀಗಿವೆ:
ಹೀಗೆ ಮಾಡಿ:
- ಕೆವೈಸಿ ಅಪ್ಡೇಟ್ಗಾಗಿ ಯಾವುದೇ ವಿನಂತಿ ಬಂದಾಗ ದೃಢೀಕರಣ / ಸಹಾಯಕ್ಕಾಗಿ ನೇರವಾಗಿ ತಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಬೇಕು.
- ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಸಂಪರ್ಕ ಸಂಖ್ಯೆ ಅಥವಾ ಗ್ರಾಹಕ ಫೋನ್ ಸಂಖ್ಯೆಯನ್ನು ಅದರ ಅಧಿಕೃತ ವೆಬ್ಸೈಟ್ ಅಥವಾ ಮೂಲಗಳ ಮೂಲಕ ಮಾತ್ರ ಪಡೆಯಿರಿ.
- ಯಾವುದೇ ಸೈಬರ್ ವಂಚನೆ ಘಟನೆ ಸಂಭವಿಸಿದಲ್ಲಿ ತಕ್ಷಣ ತಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ತಿಳಿಸಿ.
- ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡಲು ಲಭ್ಯವಿರುವ ವಿಧಾನಗಳು ಅಥವಾ ಆಯ್ಕೆಗಳನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕ್ ಶಾಖೆಯೊಂದಿಗೆ ವಿಚಾರಿಸಿ.
- ಕೆವೈಸಿ ಅಪ್ಡೇಟ್ ಅಥವಾ ಆವರ್ತಕ ಅಪ್ಡೇಟ್ ಅವಶ್ಯಕತೆಗಳು ಮತ್ತು ಮಾರ್ಗಗಳ ಬಗ್ಗೆ ಹೆಚ್ಚಿನ ವಿವರಗಳು ಅಥವಾ ಹೆಚ್ಚುವರಿ ಮಾಹಿತಿಗಾಗಿ, ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಫೆಬ್ರವರಿ 25, 2016 ರ ಕೆವೈಸಿ ಕುರಿತ ಆರ್ಬಿಐ ಮಾಸ್ಟರ್ ಡೈರೆಕ್ಷನ್ನ ಪ್ಯಾರಾ 38 ಅನ್ನು ಓದಿ.
ಹೀಗೆ ಮಾಡಬೇಡಿ:
- ಖಾತೆ ಲಾಗಿನ್ ವಿವರ, ಕಾರ್ಡ್ ಮಾಹಿತಿ, ಪಿನ್ಗಳು, ಪಾಸ್ವರ್ಡ್, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಕೆವೈಸಿ ದಾಖಲೆಗಳು ಅಥವಾ ಕೆವೈಸಿ ದಾಖಲೆಗಳ ನಕಲುಗಳನ್ನು ಹಂಚಿಕೊಳ್ಳಬೇಡಿ.
- ಪರಿಶೀಲಿಸದ ಅಥವಾ ಅನಧಿಕೃತ ವೆಬ್ಸೈಟ್ಗಳು ಅಥವಾ ಅಪ್ಲಿಕೇಶನ್ಗಳ ಮೂಲಕ ಯಾವುದೇ ಸೂಕ್ಷ್ಮ ಡೇಟಾ / ಮಾಹಿತಿಯನ್ನು ಹಂಚಿಕೊಳ್ಳಬೇಡಿ.
- ಮೊಬೈಲ್ ಅಥವಾ ಇಮೇಲ್ನಲ್ಲಿ ಬಂದ ಅನುಮಾನಾಸ್ಪದ ಅಥವಾ ಪರಿಶೀಲಿಸದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
ಇದನ್ನೂ ಓದಿ : ಬೋಟ್ ಸಂಸ್ಥೆಯಲ್ಲಿ ನಟ ರಣವೀರ್ ಸಿಂಗ್ ಭಾರೀ ಹೂಡಿಕೆ