ರತ್ಲಾಮ್: ಮಧ್ಯಪ್ರದೇಶದ ರತ್ಲಾಮ್‌ನ 24 ವರ್ಷದ ಅಕ್ಷದ್ ಪಂಡಿತ್ ಅಂಧನಾದರೂ (visually impaired) ಭಾರತದಾದ್ಯಂತ ಇರುವ ಸುಮಾರು 5,000 ರೈಲುಗಳ ಹೆಸರುಗಳು, ಸಂಖ್ಯೆಗಳು ಮತ್ತು ವೇಳಾಪಟ್ಟಿ ಹೇಳಬಲ್ಲರು. ಗೂಗಲ್ ಸರ್ಚ್ ಇಂಜಿನ್ನಂತೆಯೇ ನೀವು ರೈಲ್ವೆ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಿದರೂ, ಇವರು ಉತ್ತರವನ್ನು ನೀಡುತ್ತಾರೆ. ಅದೂ ಪರಿಪೂರ್ಣ ಮತ್ತು ನಿಖರವಾದ ಉತ್ತರ. ಇವರಲ್ಲಿರುವ ರೈಲ್ವೆ ಬಗ್ಗೆ ಮಾಹಿತಿ ನೆನಪಿಸಿಕೊಳ್ಳುವ ಸಾಮರ್ಥ್ಯಕ್ಕಾಗಿ "ರೈಲ್ವೆ ವಿಕಿಪೀಡಿಯ" ಎಂದೇ ಕರೆಯುತ್ತಾರೆ.
ದೃಷ್ಟಿಹೀನತೆಯ ಹೊರತಾಗಿಯೂ, ಅಕ್ಷದ್ ಅವರು ಬಾಲ್ಯದಲ್ಲೇ ರೈಲ್ವೇ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಜೊತೆಗೆ ಆಗಾಗ್ಗೆ ತಮ್ಮ ಕುಟುಂಬದೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಕ್ಷದ್, ನಿಲ್ದಾಣಗಳು ಮತ್ತು ರೈಲುಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. YouTube ಹಾಗೂ ಆಡಿಯೋ ರೆಕಾರ್ಡಿಂಗ್‌ಗಳಿಂದ ರೈಲುಗಳು, ವೇಳಾಪಟ್ಟಿಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಇತರ ವಿವರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅಕ್ಷದ್ ವಿಡಿಯೋಗಳ ಸಹಾಯ ಪಡೆದರು.
ಈಟಿವಿ ಭಾರತ ತಂಡ ಅಕ್ಷದ್ ಅವರನ್ನು ಬೇಟಿಯಾಗಿದ್ದು, ಅವರ ಬಳಿ ರತ್ಲಾಮ್‌ನಿಂದ ಗೋವಾ, ಜೈಪುರ, ಚೆನ್ನೈ ಮತ್ತು ಗುವಾಹಟಿಗೆ ಹೋಗುವ ರೈಲುಗಳ ಕುರಿತು ಕೇಳಿದಾಗ ಅವರಿಂದ ಬಂದಂತಹ ನಿಖರ ಮಾಹಿತಿಯನ್ನು ಕೇಳಿದಾಗ ನಮ್ಮ ತಂಡ ದಿಗ್ಭ್ರಮೆಗೊಂಡಿತು. ಅಕ್ಷದ್ ಅವರು ರೈಲುಗಳ ಹೆಸರು, ಸಂಖ್ಯೆಗಳನ್ನು ಮಾತ್ರವಲ್ಲದೆ ಯಾವ ರೈಲುಗಳು ಯಾವ ದಿನ, ಯಾವ ಸಮಯಕ್ಕೆ ಎಂಬುದನ್ನೂ ವೇಳಾಪಟ್ಟಿ ಸಮೇತ ನಿಖರವಾಗಿ ವಿವರಿಸಿದರು.
ರೈಲುಗಳ ಬಗ್ಗೆ ಅಕ್ಷದ್ ಅವರ ಜ್ಞಾನವು ಎಷ್ಟು ವಿಸ್ತಾರವಾಗಿದೆ ಎಂದರೆ ರತ್ಲಾಮ್ನಲ್ಲಿರುವ ಜನರು ರೈಲ್ವೆ ವಿಚಾರಣಾ ಸಂಖ್ಯೆಗೆ ಕರೆ ಮಾಡುವುದಕ್ಕಿಂತ ಹೆಚ್ಚಾಗಿ ರೈಲುಗಳ ಬಗ್ಗೆ ಮಾಹಿತಿಗಾಗಿ ಇವರನ್ನೇ ಸಂಪರ್ಕಿಸುತ್ತಾರೆ. ಹೌದು, ಅಕ್ಷದ್ ಅವರು ಪ್ರತಿ ರೈಲ್ವೆ ಮಾರ್ಗದ ಹೆಸರುಗಳು, ಸಂಖ್ಯೆಗಳು ಮತ್ತು ವೇಳಾಪಟ್ಟಿಯನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಮತ್ತು ದೇಶಾದ್ಯಂತ ರೈಲ್ವೆ ವಿಭಾಗಗಳಲ್ಲಿ ಚಲಿಸುವ ಪ್ಯಾಸೆಂಜರ್ ರೈಲುಗಳ ಬಗ್ಗೆಯೂ ಮಾಹಿತಿ ನೀಡುತ್ತಾರೆ.
ರೈಲುಗಳ ಜ್ಞಾನದ ಜೊತೆಗೆ ರೈಲ್ವೆ ಇಂಜಿನ್‌ಗಳ ಬಗ್ಗೆಯೂ ಅವರಿಗೆ ಸಾಕಷ್ಟು ಜ್ಞಾನವಿದೆ. ರೈಲಿಗೆ ಜೋಡಿಸಲಾದ ಎಂಜಿನ್ ಪ್ರಕಾರವನ್ನು ಅದರ ಧ್ವನಿಯ ಆಧಾರದ ಮೇಲೆ ಗುರುತಿಸುವ ಸಾಮರ್ಥ್ಯ ಅವರದು. ರೈಲಿನಲ್ಲಿ ಎಲೆಕ್ಟ್ರಿಕ್ ಇಂಜಿನ್ ಇದೆಯೇ ಅಥವಾ ಲೋಕೋ ಇಂಜಿನ್ ಇದೆಯೇ ಎಂಬುದನ್ನು ಸಹ ಅವರು ಇಂಜಿನ್‌ನ ಶಬ್ಧದ ಮೂಲಕವೇ ಹೇಳುತ್ತಾರೆ. ರೈಲಿನ ಸದ್ದು ಕೇಳಿದರೆ ರೈಲು ನದಿಯ ಸೇತುವೆ ಅಥವಾ ಸುರಂಗದ ಮೂಲಕ ಹಾದು ಹೋಗುತ್ತಿದೆಯೇ ಎಂಬುದನ್ನೂ ಹೇಳುತ್ತಾರೆ.
ಅಕ್ಷದ್ ಅವರ ಈ ವಿಶೇಷ ಪ್ರತಿಭೆ ಅವರಿಗೆ ಮನ್ನಣೆ ತಂದುಕೊಟ್ಟಿದೆ. ಮಾತ್ರವಲ್ಲದೆ ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ತಮ್ಮದೇ ಆದ ಯೂಟ್ಯೂಬ್ ಚಾನಲ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಅದರಲ್ಲಿ ಜನರಿಗಾಗಿ ದೇಶದ ಎಲ್ಲಾ ರೈಲ್ವೆ ಮಾರ್ಗಗಳಲ್ಲಿ ರೈಲುಗಳ ಬಗ್ಗೆ ಮಾಹಿತಿ ಅಪ್ಲೋಡ್ ಮಾಡುತ್ತಾರೆ. 24 ವರ್ಷದ ಅಕ್ಷದ್ ಪಂಡಿತ್ ಅವರ ಮೊದಲ ಆಯ್ಕೆ ರೈಲ್ವೆ. ಸಂಗೀತ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಮಾಡಲು ಬಯಸುವ ಅಕ್ಷದ್ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅಕ್ಷದ್ ಅವರ ಸಾಧನೆಯ ಬಗ್ಗೆ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಹೆಮ್ಮೆಯಿದೆ. ಅವರ ದೃಷ್ಟಿಹೀನತೆಯ ಹೊರತಾಗಿಯೂ, ಅಕ್ಷದ್‌ನ ದೃಢಸಂಕಲ್ಪ ಮತ್ತು ಉತ್ಸಾಹವು ಅವರಿಗೆ ಸ್ಥಳೀಯವಾಗಿ ಪ್ರಸಿದ್ಧಿ ತಂದಿದೆ. ಮಾತ್ರವಲ್ಲದೆ ಅವರ ರೈಲ್ವೆ ಬಗೆಗಿನ ಜ್ಞಾನ ಸುತ್ತಲಿನವರಿಗೆ ಆಶ್ಚರ್ಯದ ಜೊತೆಗೆ ಸ್ಫೂರ್ತಿಯನ್ನೂ ನೀಡುತ್ತಿದೆ.
ತಾಯಿ ಸ್ವಾತಿ ಪಂಡಿತ್ ಮಾತನಾಡಿ, "ಅಕ್ಷದ್ ಬಾಲ್ಯದಿಂದಲೂ ದೃಷ್ಟಿಹೀನ. ಆತನ ಎರಡೂ ಕಣ್ಣಗಳಿಗೆ ಸ್ವಲ್ಪ ದೂರದವರೆಗೆ ಮಂದವಾಗಿ ಕಾಣಿಸುತ್ತಿದ್ದರೂ, ತನ್ನ ತೀಕ್ಷ್ಣವಾದ ಜ್ಞಾಪಕಶಕ್ತಿಯಿಂದಾಗಿ 5000 ರೈಲುಗಳ ಹೆಸರು, ಸಂಖ್ಯೆ ಮತ್ತು ವೇಳಾಪಟ್ಟಿಯನ್ನು ನೆನಪಿನಲ್ಲಿಟ್ಟುಕೊಂಡಿದ್ದಾನೆ. ನಾನು ಅಥವಾ ಇತರ ಪರಿಚಯಸ್ಥರು ರೈಲ್ವೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಕೇಳಿದರೂ, ಹೇಳುತ್ತಾನೆ. ಫೋನ್ ಮಾಡಿಯೂ ಆತನ ಬಳಿ ಮಾಹಿತಿ ಕೇಳುತ್ತಾರೆ" ಎನ್ನುತ್ತಾರೆ.
ತಂದೆ ಭುವನೇಶ್ ಪಂಡಿತ್ ಮಾತನಾಡಿ, "ಬಾಲ್ಯದಿಂದಲೂ ಆತನಿಗೆ ರೈಲ್ವೆ ಬಗ್ಗೆ ಆಸಕ್ತಿ. ಕುಟುಂಬ ಸಮೇತ ಭೋಪಾಲ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಮಯ ಆತ ಪ್ರಯಾಣ ಪೂರ್ತಿ ನಿದ್ರೆ ಮಾಡಿರಲಿಲ್ಲ. ನಿಲ್ದಾಣಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ. ರೈಲುಗಳ ಬಗ್ಗೆ ಕುಳಿತುಕೊಂಡು ಮಾಹಿತಿಗಳನ್ನು ಕೇಳುವ ಮೂಲಕ ಕ್ರಮೇಣ ಅಕ್ಷದ್ ಭಾರತದಾದ್ಯಂತ ಇರುವ ರೈಲುಗಳ ಬಗ್ಗೆ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಪ್ರಾರಂಭಿಸಿದ" ಎಂದರು.
ಇದನ್ನೂ ಓದಿ: ಬಡ ಬುಡಕಟ್ಟು ಕಾರ್ಮಿಕನಿಂದ ಕುಗ್ರಾಮದಲ್ಲಿ ನಿರ್ಮಾಣವಾಯಿತು ಹೈಟೆಕ್ ರೆಕಾರ್ಡಿಂಗ್ ಸ್ಟುಡಿಯೋ: ಹೇಗಿದೆ ಗೊತ್ತಾ?