ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯ ರಾಮಮಂದಿರದಲ್ಲಿ ಇಂದು ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ. ಆದರೆ, ಈ ಮಂದಿರದ ನಿರ್ಮಾಣದ ಹಿಂದೆ ಅನೇಕರ ತ್ಯಾಗ, ಸವಾಲುಗಳು ಮತ್ತು ರಾಜಕೀಯ ಬೆಳವಣಿಗೆಗಳು ನಡೆದಿವೆ. ರಾಮಮಂದಿರ ನಿರ್ಮಾಣಕ್ಕೆ ರಾಮಭಕ್ತರು, ವಿವಿಧ ಹಿಂದೂ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ನಾಯಕರು ಮಾತ್ರವಲ್ಲದೆ, ಸರ್ಕಾರಿ ಸೇವೆಯಲ್ಲಿದ್ದ ಅಧಿಕಾರಿಗಳ ಸಹಕಾರವೂ ಇದೆ.
ಹೌದು, 1949 ಡಿಸೆಂಬರ್ 23ರ ರಾತ್ರಿ ಫೈಜಾಬಾದ್ (ಅಯೋಧ್ಯೆ)ಯ ಬಾಬ್ರಿ ಮಸೀದಿಯೊಳಗೆ ರಾಮಲಲ್ಲಾ ಮೂರ್ತಿ ಪತ್ತೆಯಾಗಿತ್ತು. ಆಗ ಕೆ ಕೆ ನಾಯರ್ ಅವರು ಅಲ್ಲಿನ ಜಿಲ್ಲಾಧಿಕಾರಿ ಆಗಿದ್ದರು. ರಾಮಲಲ್ಲಾ ಮೂರ್ತಿ ಸಿಕ್ಕ ಬಳಿಕ ರಾಜಕೀಯವಾಗಿ ಸಾಕಷ್ಟು ಕೋಲಾಹಲ ಉಂಟಾಯಿತು. ಈ ಹಿನ್ನೆಲೆ ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಉತ್ತರ ಪ್ರದೇಶ ಸಿಎಂ ಗೋವಿಂದ ಬಲ್ಲಭ್ ಪಂತ್ ಅವರಿಗೆ ಮೂರ್ತಿಯನ್ನು ಅಲ್ಲಿಂದ ತೆರವು ಮಾಡುವಂತೆ ಸೂಚಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಮೂರ್ತಿ ತೆರವು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಆದರೆ ಸಾರ್ವಜನಿಕರ ಭಾವನೆಗಳನ್ನು ಗೌರವಿಸಿ ಅಂದಿನ ಜಿಲ್ಲಾಧಿಕಾರಿ ಕೆ. ಕೆ. ನಾಯರ್ ಅವರು ಪ್ರಧಾನಿಯ ಆದೇಶವನ್ನು ಪಾಲಿಸಿರಲಿಲ್ಲ.
ಪ್ರಧಾನಿ ಆದೇಶವನ್ನು ಪಾಲಿಸದ ಅಂದಿನ ಜಿಲ್ಲಾಧಿಕಾರಿ ಕೆ.ಕೆ. ನಾಯರ್: ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಎರಡನೇ ಬಾರಿಗೆ ನೀಡಿದ ಸೂಚನೆಯ ಮೇರೆಗೆ ಉತ್ತರ ಪ್ರದೇಶದ ಸಿಎಂ, ಜಿಲ್ಲಾಧಿಕಾರಿ ಕೆ.ಕೆ. ನಾಯರ್ ಅವರಿಗೆ ಮೂರ್ತಿ ತೆರವುಗೊಳಿಸಲು ಮತ್ತೊಮ್ಮೆ ಆದೇಶಿಸಿದರು, ಆದರೆ ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತದೆ ಮತ್ತು ಕೋಮು ಗಲಭೆಗೆ ಕಾರಣವಾಗಬಹುದು ಎಂದು ಅವರು ಮೂರ್ತಿ ತೆರವುಗೊಳಿಸುವ ಆದೇಶವನ್ನು ಎರಡನೇ ಬಾರಿಯೂ ಪಾಲಿಸಿರಲಿಲ್ಲ. ಮೂರ್ತಿ ತೆರವುಗೊಳಿಸುವುದಕ್ಕೂ ಮೊದಲು ತನ್ನನ್ನು ಕೆಲಸದಿಂದ ತೆಗೆಯಬೇಕು ಎಂದು ನಾಯರ್ ಹೇಳಿದ್ದರು. ಪರಿಸ್ಥಿತಿಯನ್ನು ಮನಗಂಡ ಉಭಯ ಸರ್ಕಾರಗಳು ಮೂರ್ತಿ ತೆರವುಗೊಳಿಸುವ ತೀರ್ಮಾನದಿಂದ ಹಿಂದೆ ಸರಿದಿದ್ದವು. ಆದರೆ ಪ್ರಧಾನಿ ಮತ್ತು ಸಿಎಂ ಆದೇಶ ಪಾಲಿಸದ ಕಾರಣ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಕೆ.ಕೆ ನಾಯರ್ ಅವರು ಹೈಕೋರ್ಟ್‌ಗೆ ಹೋಗಿ ಸರ್ಕಾರದ ಆದೇಶಕ್ಕೆ ಸ್ಟೇ ತಂದು ಮತ್ತೆ ಫೈಜಾಬಾದ್‌ನ ಜಿಲ್ಲಾಧಿಕಾರಿಯಾಗಿ ಮುಂದುವರಿದಿದ್ದರು.
ಕೆ.ಕೆ. ನಾಯರ್ ಅವರ ಈ ಪ್ರಯತ್ನದ ಬಗ್ಗೆ, ಇಂದಿಗೂ ವಿಶ್ವ ಹಿಂದೂ ಪರಿಷತ್, ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಮತ್ತು ರಾಮಮಂದಿರ ನಿರ್ಮಾಣದಲ್ಲಿ ಅವರದ್ದು ಪ್ರಮುಖ ಪಾತ್ರವಿದೆ ಎಂದು ಶ್ಲಾಘಿಸುತ್ತಾರೆ. ಅದಕ್ಕಾಗಿಯೇ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಕಚೇರಿಯಿಂದ ಹಿಡಿದು ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ವಸ್ತುಸಂಗ್ರಹಾಲಯದವರೆಗೂ ಅವರ ಫೋಟೋಗೆ ಸ್ಥಾನ ಕಲ್ಪಿಸಲಾಗಿದೆ.
1907 ರಲ್ಲಿ ಕೇರಳದಲ್ಲಿ ಜನಿಸಿದ್ದ ಕೆ.ಕೆ. ನಾಯರ್: ಕೆ.ಕೆ. ನಾಯರ್ ಅವರ ಪೂರ್ಣ ಹೆಸರು ಕಂಡಂಗಲತ್ತಿಲ್ ಕರುಣಾಕರನ್ ನಾಯರ್ ಅವರು ಸೆಪ್ಟೆಂಬರ್ 11, 1907 ರಂದು ಕೇರಳದಲ್ಲಿ ಜನಿಸಿದರು. ಅವರ ಬಾಲ್ಯವನ್ನು ಕಳೆದದ್ದು ಕೇರಳದ ಆಲಪ್ಪುಳದ ಕುಟ್ಟನಾಡ್ ಗ್ರಾಮದಲ್ಲಿ. ನಾಯರ್ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೋದರು. ಅಲ್ಲಿಂದ ಹಿಂದಿರುಗಿದ ಅವರು ಕೇವಲ 21ನೇ ವಯಸ್ಸಿನಲ್ಲಿ ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಅವರನ್ನು ಫೈಜಾಬಾದ್‌ನ ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಿಸಲಾಗಿತ್ತು. ಐಎಎಸ್ ಕೆ.ಕೆ. ನಾಯರ್ 1949 ರಲ್ಲಿ ಫೈಜಾಬಾದ್‌ನ ಜಿಲ್ಲಾಧಿಕಾರಿಯಾಗಿದ್ದರು. ಕೆ.ಕೆ. ನಾಯರ್ ಅವರು 7 ಸೆಪ್ಟೆಂಬರ್ 1977 ರಂದು ನಿಧನರಾದರು.
ಇದನ್ನೂ ಓದಿ: ಕೋಟ್ಯಂತರ ಜನರ ಕನಸು ಸಾಕಾರ; ಅಯೋಧ್ಯೆದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮ