ವಾಷಿಂಗ್ಟನ್: ಆರ್ಎಸ್ಎಸ್ ಕೆಲವು ಧರ್ಮ, ಭಾಷೆ ಮತ್ತು ಸಮುದಾಯಗಳನ್ನು ಕೀಳಾಗಿ ಕಾಣುತ್ತದೆ. ಇದೇ ಕಾರಣಕ್ಕೆ ನಮ್ಮ ಹೋರಾಟ ಇವುಗಳ ಬಗ್ಗೆಯೇ ಹೊರತು, ರಾಜಕೀಯವಾಗಿ ಅಲ್ಲ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ವಾಷಿಂಗ್ಟನ್ ಡಿಸಿಯ ವರ್ಜೀನಿಯಾದ ಹೆರ್ಂಡನ್‌ನಲ್ಲಿ ಸೋಮವಾರ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹೋರಾಟ ಎಂದರೇನು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಮೇಲ್ನೋಟಕ್ಕೆ ಇದು ರಾಜಕೀಯ ಎನಿಸಿದರೂ, ಅದಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಸ್ಥಳದಲ್ಲಿ ನೆರೆದಿದ್ದ ಸಿಖ್ ವ್ಯಕ್ತಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸಿಖ್ಖರು ಭಾರತದಲ್ಲಿ ಟರ್ಬನ್ ಅಥವಾ ಕಡ ಧರಿಸಲು ಅವಕಾಶ ನೀಡುವುದು, ಮುಕ್ತವಾಗಿ ಗುರುದ್ವಾರ ಪ್ರವೇಶಿಸಲು ಅವಕಾಶ ನೀಡುವುದು ಇದು ಹೋರಾಟ. ಇದು ವ್ಯಕ್ತಿಗತವಾಗಿ ನಡೆಯುವ ಹೋರಾಟವಲ್ಲ. ಧರ್ಮಕ್ಕಾಗಿ ನಡೆಯುವ ಹೋರಾಟ ಎಂದರು.
ಆರ್ಎಸ್ಎಸ್ ಕೆಲವು ರಾಜ್ಯಗಳನ್ನು ಇತರೆ ರಾಜ್ಯಗಳಿಗಿಂತ ಕೀಳಾಗಿ ನೋಡುತ್ತದೆ. ಕೆಲವು ಭಾಷೆಗಳು, ಧರ್ಮ, ಸಮುದಾಯವನ್ನೂ ಇದೇ ದೃಷ್ಟಿಯಿಂದ ನೋಡುತ್ತದೆ. ತಮಿಳು, ಮರಾಠಿ, ಬಂಗಾಳಿ, ಮಣಿಪುರಿ ಅವರು ಕೀಳಾಗಿ ನೋಡುವ ಭಾಷೆಗಳು. ಇದೇ ಕಾರಣಕ್ಕೆ ನಾವು ಹೋರಾಡುತ್ತಿದ್ದೇವೆ. ಈ ವಿಷಯಗಳು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲೂ ಬರುತ್ತವೆ. ಹೀಗಾಗಿ, ನಮ್ಮ ಹೋರಾಟ ನಮಗೆ ಯಾವ ರೀತಿಯ ಭಾರತ ಬೇಕು ಎಂಬುದಾಗಿದೆ ಎಂದು ತಿಳಿಸಿದರು.
ಎಲ್ಲರಿಗೂ ಅವರದೇ ಆದ ಇತಿಹಾಸವಿದೆ. ಅವರದೇ ಸಂಪ್ರದಾಯ, ಭಾಷೆ ಇದೆ. ಪ್ರತಿಯೊಬ್ಬರೂ ಇಲ್ಲಿ ಪ್ರಮುಖರು. ಭಾರತದ ಬಗ್ಗೆ ಬಿಜೆಪಿ ಅರ್ಥೈಸಿಕೊಂಡಿಲ್ಲ. ಭಾರತ ರಾಜ್ಯಗಳ ಒಕ್ಕೂಟ ಎಂಬುದನ್ನು ಸಂವಿಧಾನದಲ್ಲೂ ಸ್ಪಷ್ಟವಾಗಿ ಬರೆಯಲಾಗಿದೆ. ಭಾಷೆ, ಸಂಪ್ರದಾಯ, ಇತಿಹಾಸ ಇತರೆಗಳ ಸಮ್ಮಿಲನವೇ ಭಾರತ. ಆದರೆ, ಅವರು ಇದು ಒಕ್ಕೂಟವಲ್ಲ, ಬೇರ್ಪಡಿಸುವ ಅಂಶ ಎನ್ನುತ್ತಾರೆ. ಇವುಗಳಲ್ಲಿ ಅವರಿಗೆ ಪ್ರಮುಖವಾಗಿರುವ ಅಂಶವೆಂದರೆ, ನಾಗ್ಪುರದ ಮುಖ್ಯಕಚೇರಿ ವಾಗ್ದಾಳಿ ನಡೆಸಿದರು.
The caste census is now an unstoppable idea.
— Rahul Gandhi (@RahulGandhi) September 10, 2024
The critical question of whether 90% of our population is meaningfully represented in India’s institutional structure - economy, government, education - demands an answer. At its core, this is an issue of fairness and justice.… pic.twitter.com/gxvmz0di65
ಒಳ್ಳೆಯ ಸಮಯ ಬಂದಾಗ ಮೀಸಲಾತಿ ರದ್ದು: ಜಾರ್ಜ್ಟೌನ್ ಯುನಿವರ್ಸಿಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಉತ್ತಮ ಸಮಯ ಬಂದಾಗ ಮೀಸಲಾತಿ ರದ್ದು ಮಾಡುತ್ತೇವೆ. ಆದರೆ ರದ್ದತಿಗೆ ಇದು ಸರಿಯಾದ ಸಮಯವಲ್ಲ ಎಂದರು.
ಮೀಸಲಾತಿ ರದ್ದು ಯಾವಾಗ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಆರ್ಥಿಕತೆಯ ಚೌಕಟ್ಟಿನಲ್ಲಿ ಇದನ್ನು ನೋಡಬೇಕು. ಬುಡಕಟ್ಟು ಜನರು 100 ರೂಪಾಯಿಯಲ್ಲಿ 10 ಪೈಸೆ ಪಡೆಯುತ್ತಿದ್ದಾರೆ. ದಲಿತರು, ಒಬಿಸಿಗಳು 100 ರೂಪಾಯಿಯಲ್ಲಿ 5 ರೂಪಾಯಿ ಪಡೆಯುತ್ತಿದ್ದಾರೆ. ಇದರ ನೈಜಾಂಶವೆಂದರೆ, ಅವರು ಭಾಗಿಯಾಗಲು ಅವಕಾಶ ಪಡೆಯುತ್ತಿಲ್ಲ. ಇದರೊಂದಿಗೆ ಶೇ 90ರಷ್ಟು ಭಾರತೀಯರು ಭಾಗಿಯಾಗುತ್ತಿಲ್ಲ ಎಂದು ವಿವರಿಸಿದರು.
ನೀವು ಉದ್ಯಮಿಗಳ ಪಟ್ಟಿಯನ್ನೊಮ್ಮೆ ನೋಡಿ. ನಿಮಗೆ ಅಲ್ಲಿ ಬುಡಕಟ್ಟು, ದಲಿತರು, ಒಬಿಸಿಗಳ ಹೆಸರು ಕಾಣುವುದಿಲ್ಲ. ಭಾರತದಲ್ಲಿ ಶೇ 50ರಷ್ಟು ಒಬಿಸಿಗಳಿದ್ದು, ಮೊದಲ 200 ಕಂಪನಿಗಳ ಪಟ್ಟಿಯಲ್ಲಿ ಒಬ್ಬರಷ್ಟೇ ಒಬಿಸಿ ಕಾಣಬಹುದು. ಇದು ಸಮಸ್ಯೆ ಎಂದರು.
ನೀವು ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಯೋಚಿಸುತ್ತೀರಿ. ಎಲ್ಲರೂ ಭಾಗಿಯಾಗುವುದರ ಬಗ್ಗೆ ಯೋಚಿಸುತ್ತೀರಿ. ಆದರೆ, ನೀವೆಲ್ಲರೂ ಅದಾನಿ ಅಥವಾ ಅಂಬಾನಿಯಾಗಲು ಸಾಧ್ಯವಿಲ್ಲ. ನಿಮಗೆ ಎಲ್ಲ ಬಾಗಿಲುಗಳು ಮುಚ್ಚಿರುವುದೇ ಇದಕ್ಕೆ ಕಾರಣ. ಸಾಮಾನ್ಯ ಜಾತಿಯವರಿಗೆ ಮಾತ್ರ ಈ ಬಾಗಿಲು ತೆರೆದಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವಕ್ಕೆ ರಾಹುಲ್ ಗಾಂಧಿ ಕಪ್ಪು ಚುಕ್ಕೆ: ಬಿಜೆಪಿ ಆರೋಪ