ಕೊರ್ಬಾ (ಛತ್ತೀಸ್‌ಗಢ): ಕೊರ್ಬಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭವಾಗಿದೆ. ಬೆಳಿಗ್ಗೆ ಸೀತಾಮರ್ಹಿ ಚೌಕ್‌ನಿಂದ ಪ್ರಯಾಣ ಪ್ರಾರಂಭವಾಯಿತು. ಛತ್ತೀಸ್‌ಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಅವರು ಕೊರ್ಬಾದಲ್ಲಿ ಧ್ವಜಾರೋಹಣ ಮಾಡುವ ಮೂಲಕ 30ನೇ ದಿನದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಚಾಲನೆ ನೀಡಿದರು. ರಾಹುಲ್ ಗಾಂಧಿ ಭೇಟಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಸಾಮಾನ್ಯರಲ್ಲಿ ಭಾರೀ ಉತ್ಸಾಹ ಮೂಡಿದೆ.
ಪ್ರಧಾನಿ ಮೋದಿ ವಿರುದ್ಧ ಗರಂ: ಕೊರ್ಬಾದಲ್ಲಿ ನಡೆದ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯನ್ನು ತೀವ್ರವಾಗಿ ವಾಕ್ ಸಮರ ನಡೆಸಿದರು. ''ನರೇಂದ್ರ ಮೋದಿ ಹಿಂದುಳಿದ ಜಾತಿಯಲ್ಲಿ ಜನಿಸಿಲ್ಲ. ಗುಜರಾತ್ ಸರ್ಕಾರ ಅವರ ಜಾತಿಯನ್ನು ಒಬಿಸಿಗೆ ಬದಲಾಯಿಸಿತು. ಆದ್ದರಿಂದಲೇ ಇಲ್ಲಿ ನನ್ನ ಸಹೋದರರು ಎಷ್ಟೇ ದುಡಿದರೂ ಸೇನೆಯಲ್ಲಾಗಲಿ ಕೋಲ್ ಇಂಡಿಯಾದಲ್ಲಾಗಲಿ ದೊಡ್ಡ ಹುದ್ದೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ'' ಎಂದು ರಾಹುಲ್ ಗಾಂಧಿ ಹೇಳಿದರು.
ಕೋಲ್ ಇಂಡಿಯಾ ಕತ್ತು ಹಿಸುಕುತ್ತಿರುವ ಸರ್ಕಾರ: ಕೋಲ್ ಇಂಡಿಯಾ ಸಾರ್ವಜನಿಕ ವಲಯದ ಘಟಕ. ಆದರೆ, ಕೋಲ್ ಇಂಡಿಯಾದ ಕತ್ತನ್ನು ಕೇಂದ್ರ ಸರ್ಕಾರ ನಿಧಾನವಾಗಿ ಹಿಸುಕುತ್ತಿದೆ. ಈಗ ಕೋಲ್ ಇಂಡಿಯಾದಲ್ಲಿ ಕೆಲಸ ಮಾಡುವವರ ಮಕ್ಕಳು ಸ್ವಂತ ಉದ್ಯಮ ಆರಂಭಿಸುವ ಕನಸು ಕಂಡರೆ, ಬ್ಯಾಂಕ್ಗಳು ಅವರಿಗೆ ಸಾಲ ನೀಡುತ್ತಿಲ್ಲ. ಅವರ ಸಮಸ್ಯೆಗಳು ಮಾಧ್ಯಮಗಳಲ್ಲಿ ಚರ್ಚೆಯಾಗಬೇಕು'' ಎಂದು ರಾಹುಲ್ ಗಾಂಧಿ ಹೇಳಿದರು. ಭಾರತದ ಯುವಕರು 8 ರಿಂದ 10 ಗಂಟೆಗಳ ಕಾಲ ಮೊಬೈಲ್ ಬಳಸುತ್ತಾರೆ. ಇದು ಒಂದು ರೀತಿಯ ಅಮಲು ಆಗಿದೆ. ನೀವು ಹೆಚ್ಚು ಮೊಬೈಲ್ ಬಳಸಿದರೆ ಅದಾನಿಯಂತಹ ಉದ್ಯಮಿಗಳು ಹೆಚ್ಚು ಹಣವನ್ನು ಗಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ''ಬಿಜೆಪಿ ಸರ್ಕಾರವು ನೋಟು ಅಮಾನ್ಯೀಕರಣ ಮಾಡಿತು. ಜಿಎಸ್‌ಟಿ ಜಾರಿಗೆ ತಂದಿತು. ಇದರಿಂದ ಸಣ್ಣ ವ್ಯಾಪಾರಿಗಳು ತುಂಬಾ ನಷ್ಟ ಅನುಭವಿಸಿದರು. ಜನರು ಹಣದುಬ್ಬರದಿಂದ ಬೇಸತ್ತು ಹೋಗಿದ್ದಾರೆ'' ಎಂದರು.
- form.twitter.com/widgets.js" charset="utf-8">
ರಾಹುಲ್ಗೆ ಸಾಥ್ ನೀಡಿದ ಪ್ರಮುಖ ನಾಯಕರು: ಕೊರ್ಬಾದ ಸೀತಾಮರ್ಹಿ ಚೌಕ್‌ನಿಂದ ಆರಂಭವಾದ ಯಾತ್ರೆಯು ಟ್ರಾನ್ಸ್‌ಪೋರ್ಟ್ ನಗರದ ಮೂಲಕ ಚುರಿಯ ಕೋಸಾ ಮಾರುಕಟ್ಟೆಯನ್ನು ತಲುಪಿದೆ. ಯಾತ್ರೆಯು ಗುರ್ಸಿಯಾ, ಚೋಟಿಯಾ ಮತ್ತು ಮೊರ್ಗೊ ಮೂಲಕ ಶಿವನಗರ ಗ್ರಾಮ ಪಂಚಾಯತ್ ಸೂರಜ್‌ಪುರ ತಲುಪಲಿದೆ. ರಾಹುಲ್ ಗಾಂಧಿ ಸೂರಜ್‌ಪುರದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಯಾತ್ರೆಯ ರಾಜ್ಯ ಸಂಯೋಜಕ ಜೈಸಿಂಗ್ ಅಗರ್ವಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸಚಿನ್ ಪೈಲಟ್, ಛತ್ತೀಸ್‌ಗಢ ರಾಜ್ಯಾಧ್ಯಕ್ಷ ದೀಪಕ್ ಬೈಜ್, ವಿರೋಧ ಪಕ್ಷದ ನಾಯಕ ಡಾ.ಚರಣ್ ದಾಸ್ ಮಹಂತ್ ಮತ್ತು ರಾಜ್ಯದ ಎಲ್ಲಾ ದೊಡ್ಡ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ಇದನ್ನೂ ಓದಿ: ಬಿಹಾರ ವಿಶ್ವಾಸಮತ ಪರೀಕ್ಷೆ ಚರ್ಚೆ ಆರಂಭ: ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತ ಮೂವರು ಆರ್ಜೆಡಿ ಶಾಸಕರು