ಚಂಡೀಗಢ: ಪಂಜಾಬ್ ರಾಜ್ಯಪಾಲ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಾಧಿಕಾರಿ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನನ್ನ ವೈಯಕ್ತಿಕ ಕಾರಣಗಳು ಮತ್ತು ಇತರ ಕೆಲವು ಬದ್ಧತೆಗಳಿಂದಾಗಿ ನಾನು ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಇದನ್ನು ಸ್ವೀಕರಿಸಿ ಎಂದು ಪುರೋಹಿತ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶುಕ್ರವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪುರೋಹಿತ್ ಭೇಟಿ ಮಾಡಿದ್ದರು. ಇತ್ತೀಚೆಗೆ ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಎಲ್ಲ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಇದರಲ್ಲಿ ಅಧಿಕಾರಿಯೊಬ್ಬರು ಬ್ಯಾಲೆಟ್ ಪೇಪರ್‌ಗಳನ್ನು ತಿದ್ದಿದ್ದಾರೆ ಎಂದು ಕಾಂಗ್ರೆಸ್-ಆಮ್ ಆದ್ಮಿ ಪಕ್ಷಗಳು ಆರೋಪಿಸಿವೆ. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒಟ್ಟಿಗೆ ಸ್ಪರ್ಧೆ ಮಾಡಿದ್ದವು.
ಇದಾದ ಕೆಲ ದಿನಗಳಲ್ಲೇ ಕೇಂದ್ರ ಗೃಹ ಸಚಿವರನ್ನು ರಾಜ್ಯಪಾಲರು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ಪುರೋಹಿತ್ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ವಿವಿಧ ವಿಷಯಗಳ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ರಾಜ್ಯಪಾಲ ಪುರೋಹಿತ್ ನಡುವೆ ಬಿಕ್ಕಟ್ಟು ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಪುರೋಹಿತ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದರು. ಜೊತೆಗೆ ತಮ್ಮ ಪತ್ರಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿಯೂ ಹೇಳಿದ್ದರು.
ಮತ್ತೊಂದೆಡೆ, ಚಂಡೀಗಢದ ಮೇಯರ್ ಚುನಾವಣೆ ಸಂಬಂಧ ಕಾನೂನು ಹೋರಾಟವನ್ನು ಆಪ್ ನಡೆಸುತ್ತಿದೆ. ಬ್ಯಾಲೆಟ್ ಪೇಪರ್‌ಗಳನ್ನು ತಿದ್ದಿದ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ, ಬುಧವಾರ ವಿಭಾಗೀಯ ಪೀಠವು ಮಧ್ಯಂತರ ಆದೇಶವನ್ನು ನೀಡಲು ನಿರಾಕರಿಸಿತ್ತು. ಇದೇ ವೇಳೆ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೂ ಮೊರೆ ಹೋಗಲಾಗಿದೆ. ಈ ಬಗ್ಗೆ ತುರ್ತು ವಿಚಾರಣೆಯನ್ನು ಕೋರಿ ಆಪ್ ಕೌನ್ಸಿಲರ್ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತ್ತಿಸಿದೆ.
ಇದನ್ನೂ ಓದಿ: ಜಾರ್ಖಂಡ್ ಸರ್ಕಾರವನ್ನ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ; ರಾಹುಲ್ ಗಾಂಧಿ