ನವದೆಹಲಿ: ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಂಗ ವ್ಯವಸ್ಥೆ ಮೇಲೆ ಭಾರತದ ಜನತೆ ಎಂದು ಅಪನಂಬಿಕೆಯನ್ನು ಹೊಂದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು. ಭಾರತದ ಸರ್ವೋಚ್ಛ ನ್ಯಾಯಾಲಯದ 75ನೇ ವರ್ಷಾಚರಣೆ ಹಿನ್ನೆಲೆ ಭಾರತ್ ಮಂಟಪದಲ್ಲಿ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವೋಚ್ಛ ನ್ಯಾಯಾಲಯದ 75ನೇ ವರ್ಷದ ಪಯಣದಲ್ಲಿ ಸಂವಿಧಾನಿಕ ಮೌಲ್ಯ ಮತ್ತು ಭಾರತ ಪ್ರಬುದ್ಧ ಪ್ರಜಾಪ್ರಭುತ್ವದಿಂದ ಹೊರಹೊಮ್ಮಿದೆ. ಜನರು ಎಂದಿಗೂ ಭಾರತದ ನ್ಯಾಯಾಂಗ ಮತ್ತು ಸುಪ್ರೀಂ ಕೋರ್ಟ್ ಅನ್ನು ಅಪನಂಬಿಕೆ ಹೊಂದಿಲ್ಲ. ಇದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ತನ್ನ 75ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ತಾಯಿಯಾದ ಭಾರತದ ವೈಭವವನ್ನು ಹೆಚ್ಚಿಸಿದೆ. ನಾವು ಹೊಂದಿರುವ ನಂಬಿಕೆ ಮತ್ತು ಭರವಸೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲೂ ಸುಪ್ರೀಂಕೋರ್ಟ್ ಮೂಲಭೂತ ಹಕ್ಕನ್ನು ಎತ್ತಿ ಹಿಡಿದಿದೆ. ರಾಷ್ಟ್ರೀಯ ಏಕತೆ ವಿಷಯವು ರಾಷ್ಟ್ರದ ಹಿತಾಸಕ್ತಿಯಾಗಿದೆ ಎಂದರು.
Addressing the National Conference of District Judiciary.https://t.co/QRCLSh1mDS
— Narendra Modi (@narendramodi) August 31, 2024
ಸುಪ್ರೀಂಕೋರ್ಟ್ ಸ್ಥಾಪನೆಯಾಗಿ 75 ವರ್ಷದ ಸ್ಮರಣೆಗೆ ಇದೇ ವೇಳೆ ಪ್ರಧಾನಿ, ಅಂಚೆ ಚೀಟಿ ಮತ್ತು ನಾಣ್ಯವನ್ನು ಅನಾವರಣ ಮಾಡಿದರು. ಕಳೆದ 10 ವರ್ಷಗಳಿಂದ ನ್ಯಾಯಾಲಯದ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರವು 8 ಸಾವಿರ ಕೋಟಿ ರೂ. ವ್ಯಯಿಸಿದೆ. ನ್ಯಾಯದ ವಿಳಂಬವನ್ನು ತೊಡೆದುಹಾಕಲು ಕಳೆದೊಂದು ದಶಕದಿಂದ ಅನೇಕ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡಲಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯದ ಅಮೃತಕಾಲದಲ್ಲಿ ದೇಶದ 140 ಕೋಟಿಯ ಜನರ ಕನಸು ಒಂದೇ ಆಗಿದೆ. ಅದೇ ಅಭಿವೃದ್ಧಿ ಭಾರತ, ಹೊಸ ಭಾರತ. ಅದು ಚಿಂತನೆ ಮತ್ತು ನಿರ್ಣಯದಲ್ಲಿ ಆಧುನಿಕ ಭಾರತವಾಗಿದ್ದು, ನಮ್ಮ ನ್ಯಾಯಾಂಗವು ನಮ್ಮ ದೃಷ್ಟಿಕೋನದ ಬಲವಾದ ಆಧಾರಸ್ತಂಭವಾಗಿದೆ.
ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತು ಮಾತನಾಡಿದ ಪ್ರಧಾನಿ, ಮಹಿಳೆಯರ ವಿರುದ್ಧದ ದೌರ್ಜನ್ಯ ಸಮಾಜದ ಗಂಭೀರ ಕಾಳಜಿ ವಿಷಯವಾಗಿದೆ. ಮಹಿಳೆಯರ ಸುರಕ್ಷತೆ ಅನೇಕ ಕಟ್ಟುನಿಟ್ಟಿನ ಕಾನೂನನ್ನು ಮಾಡಲಾಗಿದೆ. ಆದರೆ, ಅದನ್ನು ಮತ್ತಷ್ಟು ಕ್ರೀಯಾಶೀಲವಾಗಿ ಮಾಡಬೇಕಿದೆ. ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧದ ಪ್ರಕರಣಗಳಲ್ಲಿ ತ್ವರಿತ ನಿರ್ಣಯ ಆಗಬೇಕಿದೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘಾವಲ್, ಸಿಜೆಐ ಡಿ ವೈ ಚಂದ್ರಚೂಡ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷ ಕಪಿಲ್ ಸಿಬಲ್ ಕೂಡ ಹಾಜರಿದ್ದರು. ಎರಡು ದಿನದ ಈ ಸಮಾವೇಶವನ್ನು ಭಾರತದ ಸರ್ವೋಚ್ಛ ನ್ಯಾಯಾಲಯ ಆಯೋಜಿಸಿದ್ದು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಜಿಲ್ಲಾ ನ್ಯಾಯಾಂಗದ 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಆ.31ರಿಂದ ಆರ್ಎಸ್ಎಸ್ ಸಮನ್ವಯ ಬೈಠಕ್: ಶತಮಾನೋತ್ಸವ ಆಚರಣೆಯ ಕುರಿತು ಚರ್ಚೆ