ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಗುಜರಾತ್ನ ಸಬರಮತಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಉತ್ತರ ಭಾರತೀಯ ವಿಕಾಸ ಸೇನೆ ಎಂಬ ಪ್ರಾದೇಶಿಕ ಪಕ್ಷ ಪತ್ರ ಬರೆದಿದೆ.
ಪತ್ರದಲ್ಲಿ ಬಿಷ್ಣೋಯಿಯನ್ನು 'ಕ್ರಾಂತಿಕಾರಿ' ಎಂದು ಬಣ್ಣಿಸಲಾಗಿದೆ. ಆತನ ರಾಜಕೀಯ ಪ್ರವೇಶವು ಗಮನಾರ್ಹ ಬದಲಾವಣೆಗಳನ್ನು ತರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ. ನೀವು ನಮ್ಮ ಪ್ರಸ್ತಾಪವನೆಯನ್ನು ಒಪ್ಪಿ, ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲುವಿಗಾಗಿ ಪಕ್ಷ ಎಲ್ಲ ರೀತಿಯ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದೆ.
"ನೀವು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರಸ್ತಾಪಿಸುತ್ತೇವೆ. ಉತ್ತರ ಭಾರತೀಯ ವಿಕಾಸ ಸೇನೆಯ ಕಾರ್ಯಕರ್ತರು ಮತ್ತು ನಾಯಕರು ನಿಮ್ಮ ಪರ ನಿಲ್ಲಲು ಸಿದ್ಧರಾಗಿದ್ದಾರೆ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಉತ್ತರ ಭಾರತೀಯರಾದ ನೀವು ನಮ್ಮ ಪಕ್ಷದ ಮೌಲ್ಯಗಳಿಗೆ ಹೊಂದಿಕೆಯಾಗುತ್ತೀರಿ" ಎಂದು ಪತ್ರದಲ್ಲಿ ಬರೆಯಲಾಗಿದೆ.
ಝಣಝಣ ಕಾಂಚಾಣ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿ ಮಾಡಲಾಗಿದೆ. ಅಕ್ರಮಗಳನ್ನು ತಡೆಯಲು ಪೊಲೀಸರು ಮತ್ತು ಚುನಾವಣಾ ಆಯೋಗ ತೀವ್ರ ಎಚ್ಚರಿಕೆ ವಹಿಸಿದ್ದು, ಪುಣೆ ಗ್ರಾಮಾಂತರ ಪೊಲೀಸರು ಕಾರೊಂದರಿಂದ ಕೋಟಿ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಮುಂಬೈ-ಬೆಂಗಳೂರು ಹೆದ್ದಾರಿಯ ಶಿವಪುರ ಟೋಲ್ ಬೂತ್‌ನಲ್ಲಿ ಪುಣೆ ಗ್ರಾಮಾಂತರ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಕಾರಿನಲ್ಲಿ ಭಾರೀ ಮೊತ್ತದ ನದು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಗೆ ಏಕಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹತ್ಯೆಗೆ ₹1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ