ರಿಷಿಕೇಶ(ಉತ್ತರಾಖಂಡ): ರಿಷಿಕೇಶದ ಏಮ್ಸ್ನ ಹಿರಿಯ ವೈದ್ಯಕೀಯ ಸಿಬ್ಬಂದಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಕಿರಿಯ ವೈದ್ಯೆ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಇಲ್ಲಿನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಗುರುವಾರ ಪೊಲೀಸರು ಆಸ್ಪತ್ರೆಯ ಮೂರನೇ ಮಹಡಿಗೆ ಜೀಪ್ ನುಗ್ಗಿಸಿ ಆರೋಪಿ ಹಿರಿಯ ವೈದ್ಯನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ಅಚ್ಚರಿ ಮೂಡಿಸಿದರು.
ಆರೋಪಿ ವೈದ್ಯನ ಬಂಧನ ಕಾರ್ಯಾಚರಣೆ ಥೇಟ್ ಸಿನಿಮಾ ಶೈಲಿಯಲ್ಲಿತ್ತು. ಈ ಕಾರ್ಯಾಚರಣೆಯನ್ನು ಐಜಿ (ಇನ್ಸ್‌ಪೆಕ್ಟರ್ ಜನರಲ್) ಗರ್ವಾಲ್ ಕರಣ್ ಸಿಂಗ್ ನಾಗ್ನ್ಯಾಲ್ ಖಚಿತಪಡಿಸಿದ್ದಾರೆ.
ಘಟನೆಯ ವಿವರ: ಲೈಂಗಿಕ ಕಿರುಕುಳ ಘಟನೆ ವರದಿಯಾದ ನಂತರ ಆರೋಪಿ ವೈದ್ಯ ಅನಾರೋಗ್ಯದ ನೆಪ ಹೇಳಿ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಹೀಗಾಗಿ ಆತನನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿತ್ತು. ಏಕೆಂದರೆ, ಆಸ್ಪತ್ರೆಯ ವಾರ್ಡ್‌ನಿಂದ ಬಂಧಿಸಿ ಕರೆತರುತ್ತಿದ್ದರೆ ಹಲ್ಲೆ ನಡೆಯುವ ಸಾಧ್ಯತೆ ದಟ್ಟವಾಗಿತ್ತು. ಹೀಗಾಗಿ, ಪೊಲೀಸರು ಆಸ್ಪತ್ರೆಯ ನೆಲ ಮಹಡಿಯಲ್ಲಿರುವ ತುರ್ತು ಚಿಕಿತ್ಸಾ ಘಟಕದ ಮೂಲಕ ಜೀಪ್ ನುಗ್ಗಿಸಿದ್ದಾರೆ. ಅಲ್ಲಿದ್ದ ಮಾರ್ಗದ ಮೂಲಕ ನೇರವಾಗಿ 4ನೇ ಮಹಡಿಗೆ ತೆರಳಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಲೈಂಗಿಕ ಕಿರುಕುಳ, ಆತ್ಮಹತ್ಯೆ ಬೆದರಿಕೆ: ಕಳೆದ ಭಾನುವಾರ ಶಸ್ತ್ರಚಿಕಿತ್ಸಾ ವಿಭಾಗದ ಕೊಠಡಿಯಲ್ಲಿ ಹಿರಿಯ ವೈದ್ಯಕೀಯ ಸಿಬ್ಬಂದಿ, ಕಿರಿಯ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆಗೆ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಅಷ್ಟೇ ಅಲ್ಲದೇ, ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿದ್ದ. ಆದರೆ ಈ ಕಿರುಕುಳ ತಡೆಯಲಾಗದೇ ಸಂತಸ್ತೆ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದರು. ಇದರ ಜೊತೆಗೆ, ಆಸ್ಪತ್ರೆ ಸಿಬ್ಬಂದಿ ಕೂಡಾ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಿದ್ದರು. ಇದನ್ನರಿತ ಆರೋಪಿ ವೈದ್ಯ ತನಗೆ ಅನಾರೋಗ್ಯವೆಂದು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದ.
ಆರೋಪಿಯನ್ನು ಬಂಧಿಸಲು ಆಸ್ಪತ್ರೆಗೆ ಆಗಮಿಸಿದ ಪೊಲೀಸರಿಗೆ ಆಸ್ಪತ್ರೆ ಸಮೀಪ ಬಿಗುವಿನ ವಾತಾವರಣವಿರುವುದು ಕಂಡುಬಂದಿದೆ. ಹೀಗಾಗಿ ಆಸ್ಪತ್ರೆಯೊಳಗೆ ಆಂಬ್ಯುಲೆನ್ಸ್ ತೆರಳಲು ಇರುವ ಮಾರ್ಗದಲ್ಲಿಯೇ ನಿಧಾನವಾಗಿ ಜೀಪ್ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; ಏಳು ಕಾರ್ಮಿಕರು ಸಾವು, 50 ಜನರಿಗೆ ಗಾಯ - BLAST IN CHEMICAL FACTORY