ಮೊರಾನ್ (ಅಸ್ಸೋಂ): ಲಾಹೋವಲ್‌ನ ರಂಗಪುರಿಯ ಎಂಬಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಪೊಲೀಸ್ ಅಧಿಕಾರಿಯೊಬ್ಬ ಮಹಿಳೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಳಿಕ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನುಪಮ್ ಗೋವಾಲಾ ಎಂಬುವರು ಆತ್ಮಹತ್ಯೆಗೆ ಶರಣಾದ ನಮ್ರೂಪ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಯಾಗಿದ್ದಾರೆ. ಶುಕ್ರವಾರ ರಾತ್ರಿ ಬಿಷ್ಣುಪ್ರಿಯಾ ಲಹಾನ್ ಗೊಗೊಯ್ ಎಂಬ ಮಹಿಳೆ ಮೇಲೆ ಅನುಪಮ್ ಗೋವಾಲಾ ಅವರು, ತಮ್ಮ ಸರ್ವೀಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಅಸ್ಸೋಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಆಕೆ ಸಾವನ್ನಪ್ಪಿದ್ದಾರೆ. ಲಾಹೋವಲ್‌ನ ರಂಗಪುರಿಯ ಬಿಪುಲ್ ಗೊಗೊಯ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ನಡೆದಿದೆ.
ಮೃತ ಪೊಲೀಸ್ ಅಧಿಕಾರಿ ಅನುಪಮ್ ಗೋವಾಲಾ ಅವರ ಮನೆ ಬೊಕಾಖಾಟ್‌ನ ಕಾಕೋಸಾಂಗ್ ಬಳಿ ಇದೆ ಎಂದು ಹೇಳಲಾಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ನಮ್ರೂಪ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ಲಾಹೋವಲ್‌ನ ರಂಗಪುರಿ ಪ್ರದೇಶದಲ್ಲಿ ಬಂದು ಈ ಕೃತ್ಯ ಏಕೆ ಎಸಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇತ್ತೀಚಿನ ಪ್ರಕರಣ, ಸಹೋದರನಿಗೆ ಗುಂಡಿಕ್ಕಿ ಕೊಂದ ಅಣ್ಣ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಣ್ಣನೊಬ್ಬ ತನ್ನ ಸ್ವಂತ ಸಹೋದರನಿಗೆ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢ ರಾಯಪುರದ ಸಫೈರ್ ಗ್ರೀನ್ ಫೇಸ್ ಸಮೀಪ ಇತ್ತೀಚೆಗೆ ನಡೆದಿತ್ತು. ಪಿಯೂಷ್ ಝಾ ಎಂಬವರು ಗುಂಡು ಹಾರಿಸಿದ ಅಣ್ಣ. ಪರಾಗ್ ಝಾ ಎಂಬವರು ಗುಂಡೇಟು ತಿಂದು ಮೃತಪಟ್ಟ ಸಹೋದರ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದಿದ್ದ ಸ್ಥಳೀಯ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಕೃತ್ಯ ಎಸಗಿದ ನಂತರ ಪಿಯೂಷ್ ಝಾ ವಿಡಿಯೋ ಕಾಲ್ ಮಾಡಿ ತಾಯಿಗೆ ಘಟನೆಯ ಬಗ್ಗೆ ತಿಳಿಸಿದ್ದನು. ಘಟನೆ ನಂತರ ಭಯದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದರು.
ಇವರಿಬ್ಬರು ಡ್ರೋನ್ ರಿಪೇರಿ ಮಾಡುತ್ತಿದ್ದರು. ಆದರೆ, ಪಿಯೂಷ್ ಝಾ ಮದ್ಯ ವ್ಯಸನಿ ಆಗಿದ್ದನಂತೆ. ಆಗಾಗ ಕುಡಿದು ಮನೆಗೆ ಬರುತ್ತಿದ್ದನು. ಇಬ್ಬರ ನಡುವೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಆದ್ರೆ, ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಬರೇಲಿ ಸೇನಾ ಶಿಬಿರದಲ್ಲಿ ಕೊಲೆ: ಕಾನ್ಸ್ಟೇಬಲ್ಗೆ ರೈಫಲ್ನಿಂದ ಗುಂಡು ಹಾರಿಸಿದ ಸೈನಿಕ