ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತ ಸಾರ್ವಜನಿಕ ಕಾಣಿಕೆಗಳ ಇ-ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಇದರಿಂದ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ. ಇ-ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಬಿಡ್ ಮಾಡುವಂತೆ ಮೋದಿ ಮನವಿ ಮಾಡಿದ್ದಾರೆ.
ಈ ಕುರಿತು 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರತೀ ವರ್ಷ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನನಗೆ ಉಡುಗೊರೆಯಾಗಿ ಬಂದ ಕಾಣಿಕೆಗಳನ್ನು ಹರಾಜಿಗೆ ಹಾಕಲಾಗುವುದು. ಹರಾಜು ಪ್ರಕ್ರಿಯೆಯಲ್ಲಿ ಬಂದ ಹಣ ನಮಾಮಿ ಗಂಗೆ ಯೋಜನೆ ಸೇರಲಿದೆ. ಈ ವರ್ಷದ ಹರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ನಿಮಗೆ ಆಸಕ್ತಿಕರ ಎನ್ನಿಸಿದ ವಸ್ತುಗಳ ಮೇಲೆ ಬಿಡ್ ಮಾಡಬಹುದು ಎಂದು ತಿಳಿಸಿದ್ದಾರೆ.
Every year, I auction the various mementoes I receive during the public programmes. The proceeds of the auction go to the Namami Gange initiative. I’m delighted to share that this year’s auction has opened. Do bid for the mementoes you find interesting!https://t.co/pWeq3zwuXz
— Narendra Modi (@narendramodi) September 19, 2024
ಗಂಗಾ ನದಿಯ ಪುನರುಜ್ಜೀವನ ಮತ್ತು ನದಿಯನ್ನು ಸಂರಕ್ಷಿಸುವ ಯೋಜನೆಯೇ ನಮಾಮಿ ಗಂಗೆ. ಈ ಯೋಜನೆಗೆ ವಿಶ್ವಸಂಸ್ಥೆ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ.
ಇನ್ನು ಉಡುಗೊರೆಗಳ ಇ-ಹರಾಜು ಪ್ರಕ್ರಿಯೆ ಅಕ್ಟೋಬರ್ 2ರವರೆಗೆ ನಡೆಯಲಿದೆ. ಹರಾಜಿನಲ್ಲಿ 600ಕ್ಕೂ ಹೆಚ್ಚು ಉಡುಗೊರೆಗಳಿವೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಆನ್ಲೈನ್ ಮೂಲಕ ಹರಾಜು ನಡೆಸಲಿದೆ.
ಸಾಂಪ್ರದಾಯಿಕ ಕಲಾ ಪ್ರಕಾರದ ವಸ್ತುಗಳು, ವರ್ಣಚಿತ್ರ, ಶಿಲ್ಪಗಳು, ಕರಕುಶಲ ವಸ್ತುಗಳು, ಕಲಾಕೃತಿಗಳು, ಶಾಲುಗಳು, ಶಿರಸ್ತ್ರಾಣ, ಕತ್ತಿ, ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಶ್ರೀ ದ್ವಾರಕಧೀಶ ಮಾದರಿಗಳೂ ಸೇರಿ ಹಲವು ಹಿಂದೂ ದೇವರ ಪ್ರತಿಮೆಗಳು ಹರಾಜಿನಲ್ಲಿವೆ.
ಇದನ್ನೂ ಓದಿ: ಏನಿದು ಬ್ರಹ್ಮಮುಹೂರ್ತ?: ಆ ಸಮಯದಲ್ಲಿ ಏಳುವುದರಿಂದ ಆಗುವ ಪ್ರಯೋಜನಗಳೇನು?