ನವದೆಹಲಿ: ಭೂ ಕುಸಿತಕ್ಕೆ ಒಳಗಾಗಿರುವ ವಯನಾಡ್ನಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯ ಮತ್ತು ಪುನರ್ವಸತಿ ಕಾರ್ಯ ಪರಿಶೀಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇರಳಕ್ಕೆ ಭೇಟಿ ನೀಡಿದ್ದಾರೆ. ಕಣ್ಣೂರಿಗೆ 11 ಗಂಟೆಗೆ ಬಂದಿಳಿದ ಪ್ರಧಾನಿ, ಭೂ ಕುಸಿತ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ.
PM Modi undertakes aerial survey of landslide-affected areas in Wayanad
— ANI Digital (@ani_digital) August 10, 2024
Read @ANI story | https://t.co/nbovWe42dg#PMModi #WayanadLandslide #pinarayivijayan #kerala pic.twitter.com/WmXsBd3AoD
ವೈಮಾನಿಕ ಸಮೀಕ್ಷೆ ಬಳಿಕ ದುರಂತದಿಂದ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಲಿರುವ ಅವರು, ರಕ್ಷಣಾ ತಂಡದಿಂದ ನಡೆಯುತ್ತಿರುವ ಕಾರ್ಯಾಚರಣೆ ಕುರಿತು ಮಾಹಿತಿ ಪಡೆಯಲಿದ್ದಾರೆ. ಪುನರ್ವಸತಿ ಕಾರ್ಯಾಚರಣೆ ಪ್ರಯತ್ನಗಳ ಕುರಿತು ಅವಲೋಕನ ನಡೆಸಲಿರುವ ಅವರು, ಇದೇ ವೇಳೆ ದುರಂತದ ಪರಿಣಾಮಕ್ಕೆ ಒಳಗಾಗಿರುವವರಿಗೆ ಸಾಂತ್ವನ ಹಾಗೂ ಧೈರ್ಯ ತುಂಬಲಿದ್ದಾರೆ. ಇದೇ ವೇಳೆ, ಭೂ ಕುಸಿತದಿಂದ ಪಾರಾಗಿ ನಿರಾಶ್ರಿತರ ಶಿಬಿರ ಮತ್ತು ಘಟನೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತರನ್ನು ಭೇಟಿಯಾಗಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಇದಾದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಅವರು, ಘಟನೆ ಮತ್ತು ದುರಂತದಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಗಳ ಕುರಿತು ವಿವರಣೆ ಪಡೆಯಲಿದ್ದಾರೆ.
ಘಟನೆಯ ಹಿನ್ನೆಲೆ: ಜುಲೈ 30ರಂದು ವಯನಾಡ್ ಜಿಲ್ಲೆಯ ಚೂರಾಲ್ಮಾಲ್ ಮತ್ತು ಮುಂಡಕ್ಕೈ ಪ್ರದೇಶದಲ್ಲಿ ಭಾರಿ ಭೂ ಕುಸಿತ ಸಂಭವಿಸಿತ್ತು. ಜಿಲ್ಲಾಡಳಿತದ ಪ್ರಕಾರ, ವಿಪತ್ತು ಪ್ರದೇಶದಲ್ಲಿ ನಡೆದ ರಕ್ಷಣಾ ಕಾರ್ಯದಲ್ಲಿ 226 ಮೃತ ದೇಹ ಮತ್ತು 403 ದೇಹದ ಭಾಗಗಳು ಕಂಡು ಬಂದಿವೆ. ಈ ಭಾರೀ ಅನಾಹುತವನ್ನು ರಾಷ್ಟ್ರೀಯ ವಿಪತ್ತು ಮತ್ತು ತೀವ್ರ ದುರಂತ ಎಂದು ಘೋಷಿಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಘಟನೆ ಬಳಿಕ ವಯನಾಡ್ ಜಿಲ್ಲೆಯ ಚೂರಾಲ್ಮಾಲ್ ಮತ್ತು ಮುಂಡಕ್ಕೈ ಪ್ರದೇಶದಲ್ಲಿ ಸಂಭವಿಸಿದ ಭೀಕರ ಕುಸಿತಕ್ಕೆ ತಕ್ಷಣಕ್ಕೆ ಕೇರಳ ಸರ್ಕಾರ ಸಹಾಯ ಮಾಡಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಮುಂಡಕ್ಕೈ ಮತ್ತು ಚೂರಲ್ಮಾಲ್ ಪ್ರದೇಶಗಳಲ್ಲಿ ಎಲ್ಲ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ. ಜೀವನೋಪಾಯವನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ದಿನಕ್ಕೆ 300 ರೂ ಭತ್ಯೆ ನೀಡಲಾಗುತ್ತಿದೆ. ಒಂದು ಕುಟುಂಬದಲ್ಲಿ ಇಬ್ಬರಿಗೆ ಈ ಪ್ರಯೋಜನ ಸಿಗಲಿದೆ. ಹಾಸಿಗೆ ಹಿಡಿದಿರುವ ಅಥವಾ ದೀರ್ಘಕಾಲ ಆಸ್ಪತ್ರೆಗೆ ದಾಖಲಾದ ರೋಗಿಗಳ ಕುಟುಂಬಗಳಲ್ಲಿ ಮೂರು ವ್ಯಕ್ತಿಗಳಿಗೆ ಈ ಭತ್ಯೆಯನ್ನು ವಿಸ್ತರಿಸಲಾಗಿದೆ. ಈ ಸಹಾಯವನ್ನು 30 ದಿನಗಳ ಅವಧಿಗೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿರಾಶ್ರಿತ ಶಿಬಿರದಲ್ಲಿರುವ ಪ್ರತಿ ಕುಟುಂಬವೂ ತಕ್ಷಣಕ್ಕೆ 10,000 ರೂ ಆರ್ಥಿಕ ಸಹಾಯವನ್ನು ಪಡೆಯಲಿದೆ ಎಂದು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆಯಲ್ಲಿ ನಡೆದಿದ್ದೇನು?