ನವದೆಹಲಿ: ಇಂದಿನಿಂದ ಮೂರು ದಿನಗಳ ಕಾಲದ ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್ ಮತ್ತು ಯುದ್ಧ ಪೀಡಿತ ಪ್ರದೇಶ ಉಕ್ರೇನ್ಗೆ ಪ್ರವಾಸ ನಡೆಸಿದ್ದು, ಎರಡು ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಲಿದ್ದು, ಇದೊಂದು ಐತಿಹಾಸಿಕ ಪ್ರವಾಸ ಎಂದು ಬಣ್ಣಿಸಲಾಗಿದೆ.
ಮೊದಲಿಗೆ ಆಗಸ್ಟ್ 21ರಂದು ಪೋಲೆಂಡ್ಗೆ ಅವರು ಪ್ರಯಾಣ ಬೆಳೆಸಲಿದ್ದಾರೆ. ಈ ಮೊದಲ 1979ರಲ್ಲಿ ಪ್ರಧಾನಿಯಾಗಿದ್ದ ಮೋರರ್ಜಿ ದೇಸಾಯಿ ಅವರು ಪೋಲೆಂಡ್ಗೆ ಭೇಟಿ ನೀಡಿದ್ದರು. ಇದಾದ 45 ವರ್ಷಗಳ ಬಳಿಕ ಇದೀಗ ಪ್ರಧಾನಿ ಮೋದಿ ಪೋಲೆಂಡ್ಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 23ರಂದು ಅವರು ಯುದ್ಧ ಭೂಮಿ ಉಕ್ರೇನ್ಗೆ ಭೇಟಿ ನೀಡಲಿದ್ದಾರೆ.
70 ವರ್ಷದ ರಾಜತಾಂತ್ರಿಕ ಸಂಬಂಧ: ಇನ್ನು ತಮ್ಮ ಪೋಲೆಂಡ್ ಪ್ರವಾಸ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ನಾವು ಆಚರಿಸುತ್ತಿದ್ದು, ಪೋಲೆಂಡ್ಗೆ ಭೇಟಿ ನೀಡುತ್ತಿದ್ದೇನೆ. ಕೇಂದ್ರ ಯುರೋಪಿನ ಪ್ರಮುಖ ಆರ್ಥಿಕ ಪಾಲುದಾರ ಪೋಲೆಂಡ್ ಆಗಿದ್ದು, ಪ್ರಜಾಪ್ರಭುತ್ಬ ಮತ್ತು ಬಹುತ್ವಕ್ಕೆ ನಮ್ಮ ಪರಸ್ಪರ ಬದ್ಧತೆಯ ಸಂಬಂಧ ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರವಾಸದ ವೇಳೆ ಅವರು ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಡೋನಾಲ್ಡ್ ಟಸ್ಕ್ ಜೊತೆಗೆ ದ್ವಿಪಕ್ಷಿ ಸಂಬಂಧ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ ಅವರು ಅಲ್ಲಿನ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಕೂಡ ಸಂವಹನ ನಡೆಸಲಿದ್ದಾರೆ.
1954ರಲ್ಲಿ ಭಾರತ ಮತ್ತು ಪೋಲೆಂಡ್ ರಾಜತಾಂತ್ರಿಕ ಸಂಬಂಧಕ್ಕೆ ಅಡಿಪಾಯ ಹಾಕಲಾಗಿತ್ತು. ಈ ವರ್ಷಾಚರಣೆಯು ಬೆಳವಣಿಗೆ ಮತ್ತು ದ್ವಿಪಕ್ಷಿ ಸಂಬಂಧಗಳ ಆಳವನ್ನು ಪ್ರತಿಬಿಂಬಿಸಲಿದೆ. ಈ ವೇಳೆ ಎರಡು ದೇಶಗಳು ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಬದಲಾವಣೆಯ ಆಚರಣೆ ನಡೆಸಲಿದ್ದು, ಹೊಸ ಕ್ಷೇತ್ರದಲ್ಲಿನ ಸಹಯೋಗದ ಸಂಬಂಧವನ್ನು ಅನ್ವೇಷಿಸಲಿದೆ ಎನ್ನಲಾಗಿದೆ.
ಶಾಂತಿ ಪರಿಹಾರ ದೃಷ್ಟಿಕೋನ ಹಂಚಿಕೆ: ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಆಹ್ವಾನದ ಮೇರೆಗೆ ಉಕ್ರೇನ್ಗೆ ಭೇಟಿ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಉಕ್ರೇನ್ಗೆ ಭೇಟಿ ನೀಡುತ್ತಿದ್ದು, ಈ ವೇಳೆ ಝೆಲೆನ್ಸ್ಕಿ ಜೊತೆ ದ್ವಿಪಕ್ಷೀಯ ಸಹಕಾರ ಬಲಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಶಾಂತಿಯುತ ಪರಿಹಾರದ ಕುರಿತ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಕೀವ್ಗೆ ಭೇಟಿ ನೀಡಲಿರುವ ಪ್ರಧಾನಿ ಅಲ್ಲಿ, ರಾಜಕೀಯ, ವ್ಯಾಪಾರ, ಆರ್ಥಿಕ, ಹೂಡಿಕೆಗಳು, ಶಿಕ್ಷಣ, ಸಾಂಸ್ಕೃತಿಕ, ಮಾನವೀಯ ನೆರವು ಸೇರಿದಂತೆ ಇತರೆ ಅಂಶಗಳ ಕುರಿತು ದ್ವಿಪಕ್ಷೀಯ ಸಂಬಂಧ ವಿಚಾರವನ್ನು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ಮತ್ತು ಮಾತುಕತೆ ಮೂಲಕ ಸಂಘರ್ಷವನ್ನು ಶಾಂತಿಯುತವಾಗಿಸುವ ನಿರ್ಣಯಕ್ಕೆ ಭಾರತವು ನಿರಂತರವಾಗಿ ಪ್ರೋತ್ಸಾಹಿಸಲಿದೆ. ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಭಾರತ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂಬ ಭರವಸೆಯನ್ನು ಪ್ರಧಾನಿ ನೀಡಲಿದ್ದಾರೆ.
ಇದನ್ನೂ ಓದಿ: ತೀವ್ರಗೊಂಡ ಉಕ್ರೇನ್ ದಾಳಿ: ರಷ್ಯಾದ ಕುರ್ಸ್ಕ್ನಿಂದ 1 ಲಕ್ಷ 21 ಸಾವಿರ ಜನರ ಸ್ಥಳಾಂತರ