ಅಂಬಿಕಾಪುರ(ಛತ್ತೀಸ್‌ಗಢ): ಕಾಂಗ್ರೆಸ್‌ನ ಅಪಾಯಕಾರಿ ಉದ್ದೇಶಗಳು ಒಂದರ ನಂತರ ಒಂದರಂತೆ ಬೆಳಕಿಗೆ ಬರುತ್ತಿವೆ. ಈಗ ಕಷ್ಟಪಟ್ಟು ಸಂಪಾದಿಸುವ ನಿಮ್ಮ ಮಕ್ಕಳ ಮೇಲೂ ಪಿತ್ರಾರ್ಜಿತ ತೆರಿಗೆ ಹೇರುವುದಾಗಿ ಆ ಪಕ್ಷ ಹೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಮಾ ಮಹಾಮಾಯಿ ಕಿ ಜೈ ಘೋಷಣೆಯೊಂದಿಗೆ ಇಂದು ಪ್ರಧಾನಿ ಮೋದಿ ಛತ್ತೀಸ್‌ಗಢದ ಸರ್ಗುಜಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ಭಾರತ ಸ್ವಾವಲಂಬಿಯಾದರೆ ಕೆಲವು ಶಕ್ತಿಗಳ ಆಟಗಳು ಬಂದ್ ಆಗುತ್ತವೆ. ಬಿಜೆಪಿ ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಿಂಸಾಚಾರ ಹರಡುವವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಪು ಇದೆ. ಸಂವಿಧಾನ ರಚನೆಯಾಗುತ್ತಿರುವಾಗ ದೇಶದ ಪ್ರಜ್ಞಾವಂತರು ಒಟ್ಟಾಗಿ ಸೇರಿ ಭಾರತದಲ್ಲಿ ಧರ್ಮ ಆಧಾರದ ಮೇಲೆ ಮೀಸಲಾತಿ ಬೇಡ. ದಲಿತರು, ಗಿರಿಜನರ ಹೆಸರಲ್ಲಿ ಮೀಸಲಾತಿ ನೀಡುವುದಾಗಿ ತೀರ್ಮಾನಿಸಿದ್ದರು. ಆದರೆ ವೋಟ್ ಬ್ಯಾಂಕ್ ಹಸಿವಿನ ಕಾಂಗ್ರೆಸ್ ಇದಕ್ಕೆ ಕ್ಯಾರೇ ಎನ್ನಲಿಲ್ಲ. ಸಂವಿಧಾನ, ಬಾಬಾ ಸಾಹೇಬರ ಮಾತುಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವರ್ಷಗಳ ಹಿಂದೆಯೇ ಆಂಧ್ರಪ್ರದೇಶದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕಾಂಗ್ರೆಸ್ ಯೋಜಿಸಿತ್ತು ಎಂದು ಆರೋಪಿಸಿದರು.
2009ರ ಪ್ರಣಾಳಿಕೆಯಲ್ಲಿ ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿತ್ತು. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಧರ್ಮದ ಹೆಸರಿನಲ್ಲಿ ಮೀಸಲಾತಿ ಜಾರಿಗೆ ತಂದಿತ್ತು. ಬಿಜೆಪಿ ಸರಕಾರ ಬಂದಾಗ ಕಾಂಗ್ರೆಸ್ ನಿರ್ಧಾರವನ್ನು ಬುಡಮೇಲು ಮಾಡಿತು ಎಂದು ತಿಳಿಸಿದರು.
ಕಾಂಗ್ರೆಸ್ ಎಲ್ಲಾ ಮುಸ್ಲಿಂ ಜಾತಿಗಳನ್ನು ಒಬಿಸಿ ಕೋಟಾದಲ್ಲಿ ಇರಿಸಿದೆ. ಈ ಮೂಲಕ ಸಾಮಾಜಿಕ ನ್ಯಾಯವನ್ನು ಅವಮಾನಿಸಿದೆ. ಇಡೀ ದೇಶದಲ್ಲಿ ಕರ್ನಾಟಕದ ಮಾದರಿಯನ್ನು ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ ಎಂದರು.
ಜೂನ್ 4ರ ನಂತರ ಛತ್ತೀಸ್‌ಗಢದ ಪ್ರತಿ ಕುಟುಂಬದ ವೃದ್ಧ ಪೋಷಕರಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಸರ್ಗುಜದ 1 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಕಿಸಾನ್ ನಿಧಿಯ 200 ಕೋಟಿ ರೂಪಾಯಿ ಜಮಾ ಮಾಡಲಾಗಿದೆ. ಮುಂಬರುವ 5 ವರ್ಷಗಳಲ್ಲಿ ಬಹಳಷ್ಟು ಮಾಡಬೇಕಾಗಿದೆ. ಸರ್ಗುಜ ಅಂದರೆ 'ಸ್ವರ್ಗದ ಮಗಳು' ಎಂದರ್ಥ. ಈ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕಿದೆ. ಆದ್ದರಿಂದ ಕಮಲ ಪ್ರತಿಯೊಂದರಲ್ಲೂ ಅರಳಬೇಕು. ನಿಮ್ಮ ಸೇವಕನಿಗೆ ಆಶೀರ್ವಾದ ಮಾಡಿ ಎಂದು ಮೋದಿ ಮನವಿ ಮಾಡಿದರು.
ಇದನ್ನೂ ಓದಿ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ: ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ - public campaign ends today