ವಿಶಾಖಪಟ್ಟಣ (ಆಂಧ್ರಪ್ರದೇಶ): ನಾಯಿ ದಾಳಿಗೆ ತಂದೆ-ಮಗ ಸಾವನ್ನಪ್ಪಿರುವ ಘಟನೆ ವಿಶಾಖ ಜಿಲ್ಲೆಯ ಭೀಮುನಿಪಟ್ಟಣಂ ವಲಯದ ಎಗುವಪೇಟೆಯಲ್ಲಿ ನಡೆದಿದೆ. ಮನೆಯಲ್ಲಿದ್ದ ಸಾಕು ನಾಯಿ ಕಚ್ಚಿದ್ದರಿಂದ ತಂದೆ ಮತ್ತು ಮಗ ಸಾವನ್ನಪ್ಪಿದ್ದಾರೆ. ಮಗ ಸಾವನ್ನಪ್ಪಿದ ನಾಲ್ಕು ದಿನಗಳ ನಂತರ ತಂದೆಯೂ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತರ ಸಂಬಂಧಿಕರು ಹಾಗೂ ವೈದ್ಯರ ಮಾಹಿತಿ: ಎಗುವಪೇಟೆಯಲ್ಲಿ ಮೀನುಗಾರ ಕುಟುಂಬದ ಅಲ್ಲಿಪಲ್ಲಿ ನರಸಿಂಗ ರಾವ್ (59), ಚಂದ್ರಾವತಿ (57) ಹಾಗೂ ಪುತ್ರ ಭಾರ್ಗವ್ (27) ವಾಸವಾಗಿದ್ದರು. ಕುಟುಂಬಸ್ಥರು ಶ್ವಾನವೊಂದನ್ನು ಸಾಕಿಕೊಂಡಿದ್ದರು. ಕೆಲ ದಿನಗಳ ಹಿಂದೆ ಕುಟುಂಬದ ಯಜಮಾನ ಅಲ್ಲಿಪಲ್ಲಿ ನರಸಿಂಗರಾವ್, ಅವರ ಪತ್ನಿ ಚಂದ್ರಾವತಿ ಮತ್ತು ಮಗ ಭಾರ್ಗವ್ ಅವರಿಗೆ ನಾಯಿ ಕಚ್ಚಿತ್ತು. ಕುಟುಂಬ ಸದಸ್ಯರನ್ನು ಕಚ್ಚಿದ ಎರಡೇ ದಿನಗಳಲ್ಲಿ ನಾಯಿ ಸಾವನ್ನಪ್ಪಿದೆ. ನಂತರ, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆ (ಫಸ್ಟ್ ಡೋಸ್) ಹಾಕಿಸಿಕೊಂಡರು.
ಕುಟುಂಬದ ಯಜಮಾನ ಅಲ್ಲಿಪಲ್ಲಿ ನರಸಿಂಗ ರಾವ್ ಅವರು ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಸಮಸ್ಯೆ ಜೊತೆ, ಎರಡನೇ ಡೋಸ್ ರೇಬಿಸ್ ಲಸಿಕೆ ಹಾಕಿಸಿಕೊಳ್ಳದ ಕಾರಣ ನರಸಿಂಗರಾವ್ ವಿಧಿವಶರಾದರು. ನಾಲ್ಕು ದಿನಗಳ ಹಿಂದೆ ಮಗ ಭಾರ್ಗವ್ ಸಾವನ್ನಪ್ಪಿದ್ದರು. ಸಾಕುನಾಯಿ ದಾಳಿಗೊಳಗಾದ ಚಂದ್ರಾವತಿ ಸದ್ಯ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ತನಿಖೆ ಪೂರ್ಣಗೊಂಡ ಬಳಿಕ ಪೆನ್ಡ್ರೈವ್ ಹಂಚಿದವರು ಯಾರೆಂದು ತಿಳಿಯಲಿದೆ: ಸಚಿವ ಪರಮೇಶ್ವರ್ - G Parameshwar
ಭಿಮಿಲಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಲ್ಯಾಣ್ ಚಕ್ರವರ್ತಿ ಮೃತರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 31ರಂದು ತಮ್ಮ ಆಸ್ಪತ್ರೆಯಲ್ಲಿ ಮಗ ಭಾರ್ಗವ್ ಮತ್ತು ಅವರ ತಾಯಿ ಚಂದ್ರಾವತಿ ಅವರಿಗೆ ರೇಬಿಸ್ ಲಸಿಕೆ ಹಾಕಲಾಗಿತ್ತು ಎಂದು ಮಾಹಿತಿ ಹಂಚಿಕೊಂಡರು. ಅವರು ಮೊದಲ ಡೋಸ್ ಅನ್ನು ಮಾತ್ರ ತೆಗೆದುಕೊಂಡಿದ್ದರು, ಉಳಿದ ಲಸಿಕೆ ತೆಗೆದುಕೊಂಡಿಲ್ಲ. ಹಾಗಾಗಿ ಭಾರ್ಗವ್ ಸಾವನ್ನಪ್ಪಿದ್ದಾರೆ. ಸದ್ಯ ತಾಯಿ ಚಂದ್ರಾವತಿ ಆರೋಗ್ಯವಾಗಿದ್ದಾರೆ. ಆದ್ರೆ ನರಸಿಂಗ ರಾವ್ ಅವರು ಕಳೆದ ಎರಡು ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.