ಪೋರಬಂದರ್ (ಗುಜರಾತ್): ಗುಜರಾತ್ ಕರಾವಳಿಯಲ್ಲಿ ಮತ್ತೊಮ್ಮೆ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪೋರಬಂದರ್ ಬಳಿಯ ಸಮುದ್ರದಲ್ಲಿ ಸುಮಾರು 480 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಅಲ್ಲದೇ, ಆರು ಜನ ಪಾಕಿಸ್ತಾನದ ಪ್ರಜೆಗಳನ್ನೂ ಬಂಧಿಸಲಾಗಿದೆ.
ಇತ್ತೀಚೆಗೆ ಸೋಮನಾಥ ಸಮುದ್ರ ತೀರದಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಇದೀಗ ಗುಜರಾತ್ ಎಟಿಎಸ್, ಕೋಸ್ಟ್ ಗಾರ್ಡ್ ಮತ್ತು ಎನ್‌ಸಿಬಿ ಜಂಟಿ ಕಾರ್ಯಾಚರಣೆ ನಡೆಸಿ 480 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿದೆ. ಸಮುದ್ರದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಡ್ರಗ್ಸ್ ತುಂಬಿದ ದೋಣಿಯೊಂದಿಗೆ ಆರು ಪಾಕಿಸ್ತಾನದ ನಾಗರಿಕರನ್ನು ಅಧಿಕಾರಿಗಳು ಬಂಧಿಸಿ, ಎಲ್ಲರನ್ನೂ ಪೋರಬಂದರ್‌ಗೆ ಕರೆ ತಂದಿದ್ದಾರೆ.
ಐಸಿಜಿ ಹಡಗುಗಳು ಮತ್ತು ಡೋರ್ನಿಯರ್ ಏರ್‌ಕ್ರಾಫ್ಟ್‌ಗಳನ್ನು ಒಳಗೊಂಡ ಸಮುದ್ರ ವಾಯು ಸಂಘಟಿತ ಕಾರ್ಯಾಚರಣೆಯಲ್ಲಿ ಪೋರಬಂದರ್‌ನಿಂದ ಅರಬ್ಬಿ ಸಮುದ್ರದ ಸುಮಾರು 350 ಕಿಮೀ ದೂರದಲ್ಲಿ ಡ್ರಗ್ಸ್ ತುಂಬಿದ್ದ ಬೋಟ್ ಸೆರೆಹಿಡಿಯಲಾಗಿದೆ. ಈ ಕಾರ್ಯಾಚರಣೆಯು ಐಸಿಜಿ, ಎನ್‌ಸಿಬಿ ಮತ್ತು ಎಟಿಎಸ್ ಗುಜರಾತ್ ನಡುವೆ ಉತ್ತಮ ಸಂಘಟಿತ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇದಕ್ಕೂ ಮುನ್ನ ಗುಜರಾತ್ ಎಟಿಎಸ್, ನೌಕಾಪಡೆ ಮತ್ತು ಎನ್‌ಸಿಬಿ ಅಧಿಕಾರಿಗಳು ಪೋರಬಂದರ್ ಸಮುದ್ರದಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ 3100 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯವು ಸುಮಾರು 2000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈ ಮಾದಕ ವಸ್ತು ಸಮೇತವಾಗಿ ನಾಲ್ಕೈದು ಆರೋಪಿಗಳನ್ನು ಪತ್ತೆ ಬಂಧಿಸಲಾಗಿತ್ತು. ಅಲ್ಲದೇ, ಈ ಹಿಂದೆ ವೆರಾವಲ್ ಬಂದರಿನಲ್ಲಿ 350 ಕೋಟಿ ಮೌಲ್ಯದ 50 ಕೆಜಿ ಹೆರಾಯಿನ್ ವಶಪಡಿಸಿಕೊಂಡು, ಮೂವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಪುಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಡ್ರಗ್ಸ್ ತಯಾರಿಕೆ: 1,100 ಕೋಟಿ ಮೌಲ್ಯದ 600 ಕೆಜಿ ಮಾದಕವಸ್ತು ಜಪ್ತಿ