ವಯನಾಡ್: ಜುಲೈ 30ರಂದು ಜಿಲ್ಲೆಯಲ್ಲಿ ನಡೆದ ಭೀಕರ ಭೂ ಕುಸಿತದ ಕುರಿತು ರಕ್ಷಣಾ ಸೇವೆಗೆ ಮೊದಲು ಮಾಹಿತಿ ನೀಡಿದವರಲ್ಲಿ ವಯನಾಡ್ನ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ನೀತು ಜೊಜೊ ಕೂಡ ಒಬ್ಬರು. ದುರಂತ ಎಂದರೆ, ರಕ್ಷಣಾ ಸಿಬ್ಬಂದಿಯು ಅವರ ಸಹಾಯಕ್ಕೆ ಆಗಮಿಸುವ ಮುನ್ನವೇ ಅವರು ಉಸಿರು ಚೆಲ್ಲಿದರು. ಚೂರಲ್ಮಾಲ್ನಲ್ಲಿ ಮೊದಲ ಗುಡ್ಡ ಕುಸಿತ ಸಂದರ್ಭದಲ್ಲಿ ನೀತು ಜೊಜೊ ಮತ್ತು ಅವರ ಕುಟುಂಬ ತಕ್ಷಣಕ್ಕೆ ಸಹಾಯಕ್ಕೆ ಕರೆ ಮಾಡಿದರ ಆಡಿಯೋ, ಇದೀಗ ವೈರಲ್ ಆಗಿದೆ.
ಜುಲೈ 30ರಂದು ನಸುಕಿನಲ್ಲಿ ನಡೆದ ಈ ದುರಂತದಲ್ಲಿ ತಾವು ಅನುಭವಿಸಿದ ನೋವು, ಮೊದಲ ಗುಡ್ಡ ಕುಸಿತಕ್ಕೆ ಮನೆ ಹಾನಿಗೊಂಡ ಕುರಿತು ಅವರು ಕರೆಯಲ್ಲಿ ವಿವರಿಸಿದ್ದಾರೆ. ಈ ವಿಪತ್ತಿನ ಕುರಿತು ಮಾತನಾಡಿದ ಅವರು, ತಮ್ಮ ಮನೆಯಲ್ಲಿ ನೀರು ನುಗ್ಗಿದ್ದು, ಕಾರುಗಳು ಕೊಚ್ಚಿ ಹೋಗಿವೆ. ಮನೆಯಲ್ಲಿ ತಾವು ಐದರಿಂದ ಆರು ಮಂದಿ ಇದ್ದೇವೆ. ದುರಂತ ಸಂಭವಿಸುತ್ತಿದ್ದಂತೆ ಮನೆ ತೊರೆದು ತಕ್ಷಣಕ್ಕೆ ಅಲ್ಲಿನ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದಿದ್ದೇವೆ ಎಂದು ತಾವು ಕೆಲಸ ಮಾಡುತ್ತಿದ್ದ ಡಾ.ಮೂಪನ್ಸ್ ಮೆಡಿಕಲ್ ಕಾಲೇಜಿನ ಸಿಬ್ಬಂದಿಯೊಂದಿಗೆ ಸನ್ನಿವೇಶ ವಿವರಿಸಿದ್ದು, ಸಹಾಯದ ಭರವಸೆಯಲ್ಲಿರುವುದಾಗಿ ಹೇಳಿರುವುದು ದಾಖಲಾಗಿದೆ.
ಘಟನೆ ಕುರಿತು ಮಾಹಿತಿ ನೀಡಿದವರಲ್ಲಿ ಬಹುಶಃ ಇವರು ಮೊದಲಿಗರಾಗಿದ್ದು, ದುರದೃಷ್ಟವಶಾತ್ ಅವರ ಮೃತದೇಹ ಅವರು ತಿಳಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಘಟನೆಯಿಂದ ಆಘಾತಕ್ಕೆ ಒಳಗಾದ ಇವರು ಗಾಬರಿಯಿಂದ ರಕ್ಷಣೆಗಾಗಿ ತಮಗೆ ತಿಳಿದವರಿಗೆಲ್ಲರಿಗೂ ಕರೆ ಮಾಡಿ, ಸಹಾಯ ಕೋರಿದ್ದರು.
ಡಾ.ಮೂಪನ್ಸ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು, ಅಲ್ಲಿನ ಡಿಜಿಎಂ ಡಾ.ಶನ್ವಾಸ್ ಪಲ್ಲಿಯಲ್ ಅವರಿಗೆ ಮೊದಲ ಕರೆ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಚೂರಲ್ಮಾಲ್ನಲ್ಲಿ ಭೂ ಕುಸಿತವಾಗಿದೆ. ನಾನು ಶಾಲೆ ಹಿಂದೆ ವಾಸವಾಗಿದ್ದು, ಯಾರನ್ನಾದರೂ ಸಹಾಯಕ್ಕೆ ಕಳಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪಿಟಿಐಗೆ ಮಾತನಾಡಿರುವ ಪಲ್ಲಿಯಲ್, ಅವರು ತುಂಬ ಆಘಾತಗೊಂಡು, ಸಹಾಯಕ್ಕಾಗಿ ಕರೆ ಮಾಡಿದರು. ನಾನು ತಕ್ಷಣ ಪೊಲೀಸರು ಮತ್ತು ನಮ್ಮ ಆಸ್ಪತ್ರೆಯ ಆಂಬ್ಯುಲೆನ್ಸ್ಗೆ ಕರೆ ಮಾಡಿದೆ. ಮರಗಳು ಬಿದ್ದ ಪರಿಣಾಮ ಆ ರಸ್ತೆಗಳ ಸಂಚಾರ ಬಂದ್ ಆಗಿತ್ತು, ನಮ್ಮ ಆಂಬ್ಯುಲೆನ್ಸ್ ಚಾಲಕ ಮತ್ತು ಅವರ ಜೊತೆ ಸಂಪರ್ಕದಲ್ಲಿದ್ದ ಇನ್ನೊಬ್ಬ ಸಿಬ್ಬಂದಿ ಅವರ ಸಂಪರ್ಕಿಸುವ ಯತ್ನ ನಡೆಸಿದರು. ಆದರೆ, ಆ ಹೊತ್ತಿಗೆ ಮತ್ತೊಂದು ಭೂ ಕುಸಿತ ಸಂಭವಿಸಿದ್ದು, ಸಂಪರ್ಕ ಕಡಿತವಾಯಿತು ಎಂದಿದ್ದಾರೆ.
ಚೂರಲ್ಮಾಲ್ ಸೇತುವೆ ಕೊಚ್ಚಿ ಹೋದ ಪರಿಣಾಮ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಘಟನೆಯಲ್ಲಿ ಅವರ ಪತಿ ಜೊಜೊ, ಮಗು ಮತ್ತು ಜೊಜೊ ತಾಯಿ ಬದುಕುಳಿದಿದ್ದಾರೆ. ಭೂ ಕುಸಿತ ಸಂಭವಿಸಿದಾಗ ಆಕೆ ಮತ್ತು ಅವರ ನೆರೆ ಮನೆಯವರು ಕೋಣೆಯಲ್ಲಿ ಸಿಲುಕಿದ್ದು, ಅವರ ನಂತರದ ಭೂ ಕುಸಿತದಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ನೀತು ಸೇರಿದಂತೆ ನಮ್ಮ ಆಸ್ಪತ್ರೆಯ ನಾಲ್ಕು ಸಿಬ್ಬಂದಿ ಭೂ ಕುಸಿತಕ್ಕೆ ಜೀವ ಕಳೆದುಕೊಂಡಿದ್ದಾರೆ ಎಂದರು. (ಪಿಟಿಐ)
ಇದನ್ನೂ ಓದಿ: ವಯನಾಡ್ ಭೂಕುಸಿತಕ್ಕೆ ಮಿಡಿದ ಚಿತ್ರರಂಗ: ಸಂತ್ರಸ್ತರ ನೆರವಿಗೆ ಧಾವಿಸಿದ ಸಿನಿಮೋದ್ಯಮ