ಮುಂಬೈ: ಮಾಜಿ ಸಚಿವ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂದೇಹದ ಮೇರೆಗೆ ಮತ್ತೋರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರ ಪ್ರದೇಶದ ಬಹ್ರೈಚ್ ನಿವಾಸಿ ಹರೀಶ್ ಕುಮಾರ್ ಬಾಲಕ್ರಮ್ (23) ಎಂದು ಗುರುತಿಸಲಾಗಿದೆ. ಈತ ಪುಣೆಯಲ್ಲಿ ಸ್ಕ್ರಾಪ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಇದುವರೆಗೆ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಈ ಮೊದಲು ಹರಿಯಾಣ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶ ಮೂಲದ ರಾಜೇಶ್ ಕಶ್ಯಪ್ (19) ಎಂಬವರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಶೂಟರ್ಗಳು. ಕೊಲೆ ಪಿತೂರಿಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪುಣೆಯ ಪ್ರವೀಣ್ ಲೊನ್ಕರ್ನನ್ನು ಬಂಧಿಸಲಾಗಿದೆ. ಮತ್ತೊಬ್ಬ ಶೂಟರ್ ಶಿವಕುಮಾರ್ ಗೌತಮ್ಗೆ ಹುಡುಕಾಟ ನಡೆಯುತ್ತಿದೆ. ಪ್ರಕರಣದಲ್ಲಿ ಇದುವರೆಗೆ 6 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ತಲೆಮರೆಸಿಕೊಂಡಿರುವ ಇತರರಿಗೆ ತೀವ್ರ ಶೋಧ ನಡೆಯುತ್ತಿದೆ.
ಬಾಬಾ ಸಿದ್ದಿಕಿ ಅವರನ್ನು ಶನಿವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ಅವರ ಪುತ್ರ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತು. ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದೆ. ಈಗಾಗಲೇ ಸೆರೆಸಿಕ್ಕ ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ರಾಜೇಶ್ ಎಂಬವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗೆ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬಿಷ್ಣೋಯ್ ಹಿಟ್ಲಿಸ್ಟ್ನಲ್ಲಿ ಬಾಬಾ ಸಿದ್ದಿಕಿ ಪುತ್ರ: ಯಾರೇ ಸಿಕ್ಕರೂ ಹತ್ಯೆ ಮಾಡಲು ಬಂದಿತ್ತು ಆದೇಶ!