ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು- ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಅವರು ಅಕ್ಟೋಬರ್ 16 ರಂದು (ಬುಧವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನೂತನ ಸರ್ಕಾರ ರಚನೆಗೆ ಅನುಮತಿ ನೀಡಿದ್ದಾರೆ.
ಈ ಕುರಿತು ಒಮರ್ ಅಬ್ದುಲ್ಲಾ ಅವರಿಗೆ ಪತ್ರ ರವಾನಿಸಿರುವ ಲೆಫ್ಟಿನೆಂಟ್ ಗವರ್ನರ್, ಶಾಸಕಾಂಗ ಪಕ್ಷದ ನಾಯಕರಾದ ನಿಮಗೆ ಮತ್ತು ಸಚಿವ ಸಂಪುಟದ ಸದಸ್ಯರಿಗೆ ಬುಧವಾರ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಲಾಗಿದೆ. ದಾಲ್ ಸರೋವರದ ದಡದಲ್ಲಿರುವ ಶೇರ್ ಎ ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಳಗ್ಗೆ 11.30 ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.
Was pleased to receive the Principal Secretary to LG Manoj Sinha ji. He handed over a letter from the @OfficeOfLGJandK inviting me to form the next government in J&K. pic.twitter.com/D2OeFJwlKi
— Omar Abdullah (@OmarAbdullah) October 14, 2024
ಜಮ್ಮು- ಕಾಶ್ಮೀರ ಕಾಯಿದೆಯ ಪ್ರಕಾರ, 90 ಸದಸ್ಯ ಬಲದ ವಿಧಾನಸಭೆಯಲ್ಲಿ ಶೇಕಡಾ 10 ರಷ್ಟು ಮಂತ್ರಿಗಳನ್ನು ಹೊಂದಿರಬೇಕು ಎಂಬ ನಿಯಮವಿದೆ. ಹೀಗಾಗಿ, ಒಮರ್ ಅವರು 8 ಮಂತ್ರಿಗಳೊಂದಿಗೆ ಪ್ರಮಾಣ ವಚನ ಪಡೆಯಲಿದ್ದಾರೆ.
ನಾಯ್ಡು, ನಿತೀಶ್ಗೆ ಅಚ್ಚರಿಯ ಆಹ್ವಾನ: ಒಮರ್ ಅಬ್ದುಲ್ಲಾ ಅವರ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಎನ್ಡಿಎ ಕೂಟದ ಸದಸ್ಯರಾದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈ ಇಬ್ಬರೂ ನಾಯಕರು ಬೆಂಬಲ ನೀಡಿದ್ದರು.
ಇಂಡಿಯಾ ಕೂಟದ ಸದಸ್ಯ ಪಕ್ಷಗಳ ನೇತಾರರಾದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಎನ್ಸಿಪಿ ನಾಯಕ ಶರದ್ ಪವಾರ್, ಎಸ್ಪಿ ನಾಯಕ ಅಖಿಲೇಶ್ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ, ಡಿ.ರಾಜಾ, ಲಾಲು ಪ್ರಸಾದ್ ಯಾದವ್ ಅವರನ್ನೂ ಆಹ್ವಾನಿಸಲಾಗಿದೆ. ಇನ್ನೂ, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಚುನಾವಣೆಯಲ್ಲಿ ನಿಚ್ಚಳ ಬಹುಮತ ಸಾಧಿಸಿರುವ ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಯ ಸರ್ಕಾರ ರಚನೆಗೆ ಅವಕಾಶ ನೀಡಲು ಕೋರಿ ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಕ್ಟೋಬರ್ 12 ರಂದು ಹಕ್ಕು ಮಂಡನೆ ಮಾಡಿದ್ದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಜೊತೆಗೆ ಮಿತ್ರ ಪಕ್ಷಗಳು ನೀಡಿದ ಬೆಂಬಲ ಪತ್ರವನ್ನೂ ನೀಡಿದ್ದರು.
ಇದನ್ನೂ ಓದಿ: 6 ವರ್ಷಗಳ ಬಳಿಕ ಜಮ್ಮು & ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆತ: ಹೊಸ ಸರ್ಕಾರಕ್ಕೆ ವೇದಿಕೆ ಸಜ್ಜು