ಬರ್ಹಾಂಪುರ(ಒಡಿಶಾ): ಒಡಿಶಾ ಪೊಲೀಸರು ಸೋಮವಾರ ಮಿಲಿಟರಿ ಗುಪ್ತಚರ ದಳದೊಂದಿಗೆ ರಾಜ್ಯದ ಬರ್ಹಾಮ್‌ಪುರ ಜಿಲ್ಲೆಯಲ್ಲಿ ಸುಮಾರು 500 ಮೀಟರ್ ನಕಲಿ ಸೇನಾ ಯುದ್ಧ ಸಮವಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ಗೋಪಾಲ್‌ಪುರದ ಮಿಲಿಟರಿ ಗುಪ್ತಚರ ಘಟಕದಿಂದ ಪಡೆದ ಮಾಹಿತಿ ಆಧಾರದ ಮೇಲೆ, ಬರ್ಹಾಂಪುರ ಪೊಲೀಸರು ಇಲ್ಲಿನ 'ಗಂಜಾಮ್ ಗ್ಯಾಲಕ್ಸಿ' ಎಂಬ ಜವಳಿ ಅಂಗಡಿಯಿಂದ ನಕಲಿ ಸೇನಾ ಯುದ್ಧ ಸಮವಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ಈ ಬಗ್ಗೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕ್ತಾರರ ಪ್ರಕಾರ, ಗೋಪಾಲ್‌ಪುರದ ಆರ್ಮಿ ಎಡಿ ಕಾಲೇಜಿನಲ್ಲಿ ಕೆಲಸ ಮಾಡುವ ರಾಂಬಾಬು ಡಾಂಗಿ ಅವರು ಬರ್ಹಾಂಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಂಜಾಮ್ ಗ್ಯಾಲಕ್ಸಿ ಸ್ಟೋರ್ನಲ್ಲಿ ನಕಲಿ ಸೈನ್ಯದ ಹೊಸ ಯುದ್ಧ ಸಮವಸ್ತ್ರವನ್ನು ಮಾರಾಟ ಮಾಡುವುದನ್ನು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಹೊಸ ಡಿಜಿಟಲ್ ಮಾದರಿಯ ಯುದ್ಧ ಸಮವಸ್ತ್ರವನ್ನು ಸೇನೆಯು ಜನವರಿ 15, 2022 ರಂದು ಅನಾವರಣಗೊಳಿಸಿತ್ತು ಮತ್ತು ಹಳೆಯ ಸಮವಸ್ತ್ರವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿದೆ. ಸೈನ್ಯವು 10 ವರ್ಷಗಳ ಅವಧಿಗೆ ವಿನ್ಯಾಸ ಮತ್ತು ಮರೆಮಾಚುವ ಮಾದರಿಗಳಿಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು (IPR) ಪಡೆದುಕೊಂಡಿದೆ. ಇದನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು. ಅನಧಿಕೃತ ಮಾರಾಟಗಾರರು ಯುದ್ಧ ಸಮವಸ್ತ್ರವನ್ನು ಮುಕ್ತ ಮಾರುಕಟ್ಟೆಯಲ್ಲಿ ತಯಾರಿಸುವುದನ್ನು ಮತ್ತು ಮಾರಾಟ ಮಾಡುವುದನ್ನು ತಡೆಯಲು ಇದನ್ನು ಮಾಡಲಾಗಿದೆ. ಏಕೆಂದರೆ ಇದು ಭಾರತೀಯ ಸೇನೆಗೆ ಗಂಭೀರ ಭದ್ರತಾ ಬೆದರಿಕೆಯನ್ನು ಉಂಟುಮಾಡುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.
ಆದೇಶದ ಪ್ರಕಾರ, ಹೊಸ ಸಮವಸ್ತ್ರವನ್ನು ಸೇನೆಯ ಘಟಕ ನಡೆಸುವ ಕ್ಯಾಂಟೀನ್‌ಗಳಲ್ಲಿ ಮಾತ್ರ ಮಾರಾಟ ಮಾಡಬೇಕು. IPR ಕಾರಣದಿಂದಾಗಿ, ಸೈನ್ಯವು ಈಗ ವಿನ್ಯಾಸದ ವಿಶೇಷ ಹಕ್ಕುಗಳನ್ನು ಹೊಂದಿದೆ ಮತ್ತು ಈ ವಿನ್ಯಾಸದ ಯಾವುದೇ ಅನಧಿಕೃತ ಮಾರಾಟದ ವಿರುದ್ಧ ದೂರು ಸಲ್ಲಿಸಬಹುದು. ಈ ಪ್ರಕರಣದಲ್ಲಿ 1,20,000 ಮೌಲ್ಯದ ಒಟ್ಟು 488 ಮೀಟರ್ ಯುದ್ಧ ಸಮವಸ್ತ್ರವನ್ನು ಬರ್ಹಾಂಪುರ ಟೌನ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಂಜಾಮ್ ಗ್ಯಾಲಕ್ಸಿ ಸ್ಟೋರ್‌ನ ಮಾಲೀಕರು ಈ ಸಮವಸ್ತ್ರವನ್ನು ಕೋಲ್ಕತ್ತಾ ಮತ್ತು ಲುಧಿಯಾನದಿಂದ ಖರೀದಿಸಿದ್ದಾರೆ ಎಂದು ತನಿಖೆಯ ಸಮಯದಲ್ಲಿ ಕಂಡುಬಂದಿದೆ. ಉತ್ಪಾದನೆಯ ಸ್ಥಳ ಮತ್ತು ಅದರ ಹಿಂದಿನ ಜನರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಓದಿ: ಬೆಟ್ಟಿಂಗ್, ಶೋಕಿಗಾಗಿ ಮನೆಗಳ್ಳತನಕ್ಕಿಳಿದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಅಂದರ್