ಜಮ್ಮು (ಜಮ್ಮು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ 2ನೇ ಹಂತದ 26 ಸ್ಥಾನಗಳಿಗೆ ಇಂದು ಅಧಿಸೂಚನೆ ಹೊರಡಿಸಲಾಗುವುದು. ಈ ಹಂತದಲ್ಲಿ ಸೆ. 5 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮತ್ತು ಸೆ. 6ರಂದು ನಾಮಪತ್ರಗಳ ಪರಿಶೀಲನೆ ಮತ್ತು ಹಿಂಪಡೆಯುವಿಕೆ ನಡೆಯಲಿದೆ. ಸೆಪ್ಟೆಂಬರ್ 9 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಈ ಹಂತದ ಮತದಾನವು ಸೆಪ್ಟೆಂಬರ್ 25 ರಂದು ನಡೆಯಲಿದೆ.
ಗಂದರ್‌ಬಲ್ (ಕಂಗನ್ ಮತ್ತು ಗಂದರ್‌ಬಾಲ್) ಸೇರಿದಂತೆ ಶ್ರೀನಗರ (ಹಜರತ್‌ಬುಲ್, ಖನ್ಯಾರ್, ಹಬ್ಬಕ್ದಾಲ್, ಲಾಲ್ಚೌಕ್, ಛನ್ಪುರ, ಜಡಿವಾಲ್, ಈದ್ಗಾ, ಶಿಲ್ಟೆಂಗ್), ಬುದ್ಗಾಮ್ (ಖಾನ್ ಸಾಹಿಬ್, ಚರಾರ್-ಎ-ಷರೀಫ್, ಬುಡ್ಗಮ್, ವೀರೂರ್ ಚದುರಾ, ಪೂಂಚ್). ಸುರಾನ್‌ಕೋಟ್, ಪೂಂಚ್ ಹವೇಲಿ ಮತ್ತು ಮೆಂಧರ್, ರಿಯಾಸಿ (ಗುಲಾಬ್ಗಡ್, ಮಾತಾ ವಿಷ್ಣು ದೇವಿ ಮತ್ತು ರಿಯಾಸಿ), ರಾಜೌರಿ (ನೌಶೇರಾ, ರಾಜೌರಿ, ಬುಧಾಲ್, ಥಾನಮಂಡಿ ಮತ್ತು ಸುಂದರ್ಬನಿಯಲ್ಲಿ ಎರಡನೇ ಹಂತದ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಯ ಸಿದ್ಧತೆಗಳು ಭರದಿಂದ ಸಾಗಿವೆ.
ಇದರ ಮಧ್ಯೆ, ಮುಂಬರುವ ಮೊದಲ ಹಂತದ ಚುನಾವಣೆಗೆ ಜಮ್ಮು ಮತ್ತು ಕಾಶ್ಮೀರದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಇದುವರೆಗೂ 279 ನಾಮಪತ್ರಗಳು ಸಲ್ಲಿಕೆಯಾಗಿವೆ. 244 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. 36 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧ ಕ್ಷೇತ್ರಗಳ ಚುನಾವಣಾಧಿಕಾರಿಗಳ ಪ್ರಕಾರ, ತಿರಸ್ಕೃತಗೊಂಡ ಪತ್ರಗಳಲ್ಲಿ 14 ಸ್ವತಂತ್ರ ಅಭ್ಯರ್ಥಿಗಳು ಮತ್ತು 20 ಇತರ ಸ್ಪರ್ಧಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 18ರಂದು ನಡೆಯಲಿರುವ ಚುನಾವಣೆಯ ಮೊದಲ ಹಂತವು ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ 24 ಕ್ಷೇತ್ರಗಳ ಜೊತೆಗೆ ಚೆನಾಬ್ ಕಣಿವೆಯ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳ ಎಂಟು ಕ್ಷೇತ್ರಗಳನ್ನು ಒಳಗೊಳ್ಳಲಿದೆ. ಈ ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 30 ಅಂದರೆ ನಾಳೆ ಕೊನೆಯ ದಿನವಾಗಿದೆ.
ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ ಮೆಹಬೂಬಾ ಮುಫ್ತಿಯವರ ಪುತ್ರಿ ಇಲ್ತಿಜಾ ಮುಫ್ತಿ, PDP ಕಟ್ಟಾಳು ಅಬ್ದುಲ್ ರೆಹಮಾನ್ ವೀರಿ, ನ್ಯಾಷನಲ್ ಕಾನ್ಫರೆನ್ಸ್‌ನ ಪ್ರಮುಖ ಮಹಿಳಾ ಅಭ್ಯರ್ಥಿ ಸಕೀನಾ ಇಟ್ಟೂ, ಮಾಜಿ ಪ್ರದೇಶ ಕಾಂಗ್ರೆಸ್ ಸಮಿತಿ (PCC) ಅಧ್ಯಕ್ಷ ವಿಕಾರ್ ರಸೂಲ್ ವಾನಿ, ಹಾಗೂ ಇಂದರ್ವಾಲ್‌ನಿಂದ ಮೂರು ಬಾರಿ ಶಾಸಕರಾದ ಗುಲಾಮ್ ಮುಹಮ್ಮದ್ ಸರೂರಿ ಮತ್ತು ದೋಡಾದಿಂದ ಅಬ್ದುಲ್ ಮಜೀದ್ ವಾನಿ.
ಎಲೆಕ್ಷನ್ ಕಮಿಷನ್ ಆಗಸ್ಟ್ 16 ರಂದು ಜಮ್ಮು- ಕಾಶ್ಮೀರಕ್ಕೆ ಚುನಾವಣೆ ಘೋಷಿಸಿತ್ತು. ಇನ್ನು 2019ರ ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ಮೊದಲ ಚುನಾವಣೆ ಇದಾಗಿದೆ.