ನೋಯ್ಡಾ (ಉತ್ತರ ಪ್ರದೇಶ): ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಹತ್ಯೆಯಾದ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಪುತ್ರ ಜೀಶನ್ ಸಿದ್ದಿಕಿಗೆ ಕೊಲೆ ಬೆದರಿಕೆ ಕರೆ ಮಾಡಿದ್ದ ನೋಯ್ಡಾ ಮೂಲದ 20 ವರ್ಷದ ಯುವಕನನ್ನು ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ತಯ್ಯಬ್ ಬಂಧಿತ. ಆರೋಪಿಯು ತಮಾಷೆಗಾಗಿ ಈ ಕರೆಯನ್ನು ಮಾಡಿರುವುದಾಗಿ ತಿಳಿಸಿದ್ದಾನೆ. ಶುಕ್ರವಾರ ರಾತ್ರಿ ಪರಿಚಿತ ವ್ಯಕ್ತಿಯೊಬ್ಬ ಜೀಶನ್ ಕಚೇರಿಯ ಲ್ಯಾಂಡ್ ಲೈನ್ಗೆ ಕರೆ ಮಾಡಿ, ಜೀಶನ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಅಲ್ಲದೇ, ಹಣಕ್ಕಾಗಿ ಕೂಡ ಈತ ಆಗ್ರಹಿಸಿದ್ದ.
ಈ ಕರೆ ಬಂದ ಬೆನ್ನಲ್ಲೇ ಜೀಶನ್ ಕಚೇರಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ನಿರ್ಮಲ್ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ದೂರಿನನ್ವಯ ತನಿಖೆಗೆ ಮುಂದಾದ ಪೊಲೀಸರು ನೋಯ್ಡಾ ಸೆಕ್ಟರ್ 39ರಲ್ಲಿ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ದೆಹಲಿ ನಿವಾಸಿಯಾಗಿದ್ದು, ಯಾವುದೇ ಗ್ಯಾಂಗ್ ಜೊತೆ ಅಥವಾ ಮಾಫಿಯಾ ನಂಟು ಹೊಂದಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ಈ ರೀತಿ ಕರೆ ಮಾಡುವ ಉದ್ದೇಶ ಏನಿತ್ತು ಎಂಬ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಹಿಂದೆ ಕೂಡ ಮುಂಬೈ ಪೊಲೀಸರು ಜೆಮ್ಶೆಡ್ಪುರ ಮೂಲದ 24 ವರ್ಷದ ಶೇಖ್ ಹಸೀನ್ ಶೇಕ್ ಮೌಸಿನ್ ಎಂಬಾತನನ್ನು ಬಂಧಿಸಿದ್ದರು. ಈತ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ 5 ಕೋಟಿ ರೂ. ಬೇಡಿಕೆಯನ್ನು ಇರಿಸಿದ್ದ. ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದ.
ಜೀಶನ್ ತಂದೆ ಮತ್ತು ಎನ್ಸಿಪಿ ಹಿರಿಯ ನಾಯಕರಾಗಿದ್ದ ಬಾಬಾ ಸಿದ್ದಿಕಿಯನ್ನು ಅಕ್ಟೋಬರ್ 12ರಂದು ಬಾಂದ್ರಾ ಪೂರ್ವದ ನಿರ್ಮಲ್ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ನಟ ಸಲ್ಮಾನ್ ಖಾನ್‌ಗೆ ಹೆಚ್ಚಿದ ಬೆದರಿಕೆ: ನಟ ಸಲ್ಮಾನ್ ಖಾನ್ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬೆನ್ನಲ್ಲೇ ನಟನಿಗೂ ಭದ್ರತೆ ಬಿಗಿಗೊಳಿಸಲಾಗಿದೆ. ಸಿದ್ದಿಕಿ ಹತ್ಯೆ ಹೊಣೆ ಹೊತ್ತುಕೊಂಡಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಟ ಸಲ್ಮಾನ್ ಖಾನ್‌ಗೆ ದೀರ್ಘಕಾಲದಿಂದ ಬೆದರಿಕೆ ಒಡ್ಡುತ್ತಲೇ ಇದೆ. ಕೃಷ್ಣ ಮೃಗ ಹತ್ಯೆ ಪ್ರಕರಣದಲ್ಲಿ ಸಮುದಾಯದ ಭಾವನೆಗೆ ಧಕ್ಕೆ ತಂದ ಹಿನ್ನೆಲೆ ಅವರಿಗೆ ಈ ಕೊಲೆ ಬೆದರಿಕೆ ಎದುರಾಗಿದೆ.
ಈ ನಡುವೆ ಬಾಬಾ ಸಿದ್ದಿಕಿ ಪ್ರಕರಣದಲ್ಲಿ ಸಂಪರ್ಕ ಹೊಂದಿರುವ ಹಿನ್ನೆಲೆ 15 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ 9 ಮಂದಿಯನ್ನು ನ್ಯಾಯಾಲಯದ ಮುಂಚೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ವಿಚಾರ: ಜೆಮ್‌ಶೆಡ್‌ಪುರದ ವ್ಯಕ್ತಿ ಬಂಧಿಸಿದ ಮುಂಬೈ ಪೊಲೀಸರು