ಚೆನ್ನೈ: ಸಮುದ್ರದಾಳದ ಅನ್ವೇಷಣೆಗಾಗಿ ಮನುಷ್ಯರನ್ನು ಕಳುಹಿಸುವ ಸಿದ್ದತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದಡಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಿಂದ ಈ ಸಮುದ್ರಯಾನ ಯೋಜನೆ ನಡೆಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿ ಸಮುದ್ರದ ಆಳಕ್ಕೆ ಮನುಷ್ಯರನ್ನು ಸಂಶೋಧನೆಗಾಗಿ ಕಳುಹಿಸಲಾಗುವುದು
ಚೆನ್ನೈ ಮೂಲದ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್ಐಒಟಿ) ಸ್ವಾಯತ್ತ ಸಂಸ್ಥೆಯಾಗಿದ್ದು, ಸಮುದ್ರಾಳದ ಅಧ್ಯಯನಕ್ಕೆ ಮತ್ಸ್ಯ 6000 (MATSYA 6000) ಎಂಬ ವಾಹನವನ್ನು ತಯಾರಿಸಿದೆ. ಈ ಸಮುದ್ರಯಾನ ಯೋಜನೆ ಜಾರಿಗೆ 4,800 ಕೋಟಿ ವೆಚ್ಚ ಆಗಲಿದೆ ಎಂದು ಎನ್ಐಒಟಿ ನಿರ್ದೇಶಕ ಜಿಎ ರಾಮದಾಸ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಇನ್ನು ಕೆಲವೇ ವಾರದಲ್ಲಿ ಚೆನ್ನೈನಲ್ಲಿ ಈ ಸಂಬಂಧ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಈ ಯೋಜನೆಯ ಮುಖ್ಯ ಉದ್ದೇಶ ಸಮುದ್ರದ 6 ಸಾವಿರ ಮೀಟರ್ ಅಡಿಯಲ್ಲಿ ಸಂಶೋಧನೆ ಮಾಡುವುದಾಗಿದೆ. ಮೊದಲ ಹಂತದ ಬಂದರು ಪರೀಕ್ಷೆ ಸಮುದ್ರದಾಳದ 500 ಮೀಟರ್ ಅಡಿಯಲ್ಲಿ ನಡೆಯಲಿದೆ. ಸಮುದ್ರದ ಒಳಗೆ ಮೂರು ಜನರು ಹೋಗಬಹುದು. ಮೇಲ್ಮೈಯಲ್ಲಿರುವ ಖನಿಜ ಸಂಪನ್ಮೂಲ ನೇರವಾಗಿ ನೋಡಬಹುದಾಗಿದೆ.
ಚೆನ್ನೈನ ಪಲ್ಲಿಕರಣೈನಲ್ಲಿರುವ ಎನ್ಐಒಟಿ ಕ್ಯಾಂಪಸ್ನಲ್ಲಿನ ಪಲ್ಲಿಕರಣೈಯಲ್ಲಿ ಈ ಯೋಜನೆಯ ವಾಹನವನ್ನು ಇರಿಸಲಾಗಿದ್ದು, ಇದು ಗೋಲಾಕಾರವಾಗಿದ್ದು, ಇದರಲ್ಲಿ ಜನರು ಪ್ರಯಾಣ ಮಾಡಬಹುದಾಗಿದೆ ಎಂದು ರಾಮದಾಸ್ ತಿಳಿಸಿದ್ದಾರೆ. ಇದು 6.6 ಮೀಟರ್ ಉದ್ದ ಮತ್ತು 210 ಟನ್ ತೂಕವನ್ನು ಹೊಂದಿದ್ದು, ನೀರಿನೋಳಗೆ 48 ಗಂಟೆಗಳ ಕಾಲ ಸಂಶೋಧನೆ ನಡೆಸುವ ಸಾಮರ್ಥ್ಯ ಹೊಂದಿದೆ.
ಜನರನ್ನು ಹೊತ್ತೊಯ್ಯುವ ಗೋಲಾಕಾರದ ಈ ವಾಹನವನ್ನು ಸಂಪೂರ್ಣವಾಗಿ ಟೈಟಾನಿಯಂನಿಂದ ಮಾಡಲಾಗಿದೆ. ಟೈಟಾನಿಯಂ ಬಳಕೆ ಮಾಡಿರುವ ಕಾರಣ ಎಂದರೆ, ಇದು ಹಗುರ ಹಾಗೂ ಬೇರೆ ಲೋಹಗಳಿಗಿಂತ ಶಕ್ತಿಯಾಲಿಯಾಗಿದೆ. ಸಬ್ಮೆರಿನ್ಗೆ ಮಾಜಿ ನೌಕಾ ಅಧಿಕಾರಿಯನ್ನು ಪೈಲಟ್ ಆಗಿ ನೇಮಕ ಮಾಡಲಾಗಿದೆ. ಅವರು ಎನ್ಐಒಟಿ ವಿಜ್ಞಾನಿಗಳಿಗೆ ಎರಡು ದಿನ ಪೈಲಟ್ ತರಬೇತಿ ಕೂಡಾ ನೀಡಲಿದ್ದಾರೆ.
ಮತ್ಸ್ಯ 6000 ಯೋಜನೆಯು, ಮೂರು ಬಂದರುಗಳು, ಸಾಗರಗಳನ್ನು ಅನ್ವೇಷಿಸಲು ಎರಡು ಮ್ಯಾನಿಪ್ಯುಲೇಟರ್‌ಗಳು, ಖನಿಜ ಮಾದರಿಗಳನ್ನು ಸಂಗ್ರಹಿಸುವ ಟ್ರೇ, ಆಳವಾದ ಸಮುದ್ರ ಮತ್ತು ಸಂಪನ್ಮೂಲಗಳ ಫೋಟೋ ಸೆರೆ ಹಿಡಿಯಲು ಕ್ಯಾಮೆರಾ ಒಳಗೊಂಡಿರಲಿದೆ. ಈ ವರ್ಷವೇ ಸಮುದ್ರಯಾನ ಯೋಜನೆ ಕಾರ್ಯಗತಗೊಳ್ಳಲಿದ್ದು, 2026ರ ವೇಳೆಗೆ ಸಂಸ್ಥೆ ಅಂದುಕೊಂಡಂತೆ ಯೋಜನೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಗುರಿ ಹೊಂದಲಾಗಿದೆ.
ಎನ್ಐಒಟಿ ವಿಜ್ಞಾನಿ ಎನ್ ಆರ್ ರಮೇಶ್ ಹೇಳುವಂತೆ, ಆಳವಾದ ಸಮುದ್ರದಲ್ಲಿನ ಸಂಪನ್ಮೂಲ ಅನ್ವೇಷಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಇದೇ ವೇಳೆ ಸಂಶೋಧನೆ ಸಾಗರ ಸಂಪನ್ಮೂಲಗಳ ದುರ್ಬಳಕೆ ಪರಿಣಾಮಗಳಾಗಬಹುದೇ ಎಂಬ ಕುರಿತು ಕೂಡ ಗಮನ ಹರಿಸಲು ಎನ್ಐಒಟಿ ಮುಂದಾಗಿದೆ. ಈ ಯೋಜನೆ ಕಾರ್ಯಾರಂಭ ಮಾಡುವ ಮುನ್ನ ಹಲವು ಪೂರ್ವಭಾವಿ ಪರೀಕ್ಷೆಗಳು ಪೂರ್ಣಗೊಳ್ಳಬೇಕಿದೆ ಎಂದು ರಮೇಶ್ ಅವರು ಹೇಳಿದ್ದಾರೆ.
ಇದನ್ನೂ ಓದಿ: 1971ರ ಯುದ್ಧ: ವಿಶಾಖಪಟ್ಟಣಂ ಕರಾವಳಿಯಲ್ಲಿ ಪಾಕ್ನ ಜಲಾಂತರ್ಗಾಮಿ ನೌಕೆ 'ಘಾಜಿ' ಅವಶೇಷ ಪತ್ತೆ