ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ನೀಟ್ ಯುಜಿ ಪೇಪರ್ ಲೀಕ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪೇಪರ್ ಸೋರಿಕೆಯ ಪ್ರಮುಖ ಆರೋಪಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯಿಂದ (ಎನ್ಟಿಎ) ಪ್ರಶ್ನೆಪತ್ರಿಕೆ ಕದ್ದ ಪಂಕಜ್ಕುಮಾರ್ ಬಂಧಿತ ವ್ಯಕ್ತಿ. ಪ್ರಕರಣದಲ್ಲಿ ಇದುವರೆಗೆ 14 ಜನರನ್ನು ಬಂಧಿಸಲಾಗಿದೆ.
ಆರೋಪಿ ಪಂಕಜ್ ನೀಟ್ ಜಮ್‌ಶೆಡ್‌ಪುರದ 2017ರ ಬ್ಯಾಚ್‌ನ ಸಿವಿಲ್ ಎಂಜಿನಿಯರ್. ಹಜಾರಿಬಾಗ್‌ನಲ್ಲಿರುವ ಎನ್‌ಟಿಐ ಟ್ರಂಕ್ ಬಾಕ್ಸ್‌ಗಳಿಂದ ನೀಟ್ ಪ್ರಶ್ನೆಪತ್ರಿಕೆಯನ್ನು ಕದ್ದಿದ್ದ ಎಂದು ಹೇಳಲಾಗಿದೆ. ನಂತರ ಅದನ್ನು ರಾಜು ಸಿಂಗ್ ಎಂಬ ಇನ್ನೊಬ್ಬಾತನಿಗೆ ಕೊಟ್ಟಿದ್ದ. ಆತ ಅದನ್ನು ತನ್ನ ಗ್ಯಾಂಗ್ ಸದಸ್ಯರಿಗೆ ಹಂಚಿದ್ದ. ಈ ಹಿನ್ನೆಲೆಯಲ್ಲಿ ಸಿಬಿಐ ಇಬ್ಬರನ್ನೂ ಬಂಧಿಸಿದೆ. ಬೊಕಾರೋ ಮೂಲದ ಪಂಕಜ್ ಕುಮಾರ್ನನ್ನು ಬಿಹಾರ ರಾಜಧಾನಿ ಪಾಟ್ನಾದಲ್ಲಿ ಬಂಧಿಸಿದ್ದರೆ, ರಾಜು ಎಂಬಾತನನ್ನು ಹಜಾರಿಬಾಗ್‌ನಲ್ಲಿ ಹಿಡಿಯಲಾಗಿದೆ.
ಸಿಬಿಐ ಅಧಿಕಾರಿಗಳು ಈ ಪ್ರಕರಣದಲ್ಲಿ ಇದುವರೆಗೆ ಆರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಬಿಹಾರದಲ್ಲಿ ಪೇಪರ್ ಸೋರಿಕೆ ಪ್ರಕರಣ ದಾಖಲಾಗಿದ್ದರೆ, ಉಳಿದ ಐದು ವಂಚನೆ ಪ್ರಕರಣಗಳು ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಇದರ ಜತೆಗೆ ಕೇಂದ್ರ ಶಿಕ್ಷಣ ಇಲಾಖೆಯ ಸೂಚನೆಯಂತೆ ಸಿಬಿಐ ಸ್ವಂತವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ. ಈಗಾಗಲೇ ಹಜಾರಿಬಾಗ್‌ನ ಓಯಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಉಪಪ್ರಾಂಶುಪಾಲರು ಸೇರಿ ಇತರ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದೆ. ಸುಟ್ಟು ಹಾಕಿದ ಪ್ರಶ್ನೆ ಪತ್ರಿಕೆಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜುಲೈ 18 ರಂದು ವಿಚಾರಣೆ: ಈ ವರ್ಷದ ಮೇ 5 ರಂದು, ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ NEET-UG ಪರೀಕ್ಷೆಯನ್ನು ನಡೆಸಲಾಯಿತು. 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಗೆ 23 ಲಕ್ಷಕ್ಕೂ ಹೆಚ್ಚು ಮಂದಿ ಹಾಜರಾಗಿದ್ದರು. ಆದರೆ, ಪ್ರಶ್ನೆಪತ್ರಿಕೆ ನಡೆದಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಜುಲೈ 18 ರಂದು ಸುಪ್ರೀಂ ಕೋರ್ಟ್ ಈ ಅರ್ಜಿಗಳ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಪಿಜಿಇಟಿ -2024: ಆನ್ಲೈನ್ ಅರ್ಜಿ ಸಲ್ಲಿಸಲು ಜುಲೈ 10 ರವರೆಗೆ ಅವಕಾಶ - PGET 2024 Online Application