ಬಸ್ತಾರ್ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ಕಳೆದ 15 ದಿನಗಳಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 29 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಎಲ್ಲೆಡೆ ಬಿಗಿಭದ್ರತೆ ಒದಗಿಸಲಾಗಿದ್ದರೂ ನಾಳೆ (ಶುಕ್ರವಾರ) ಮತದಾನ ನಡೆಯಲಿರುವ ಬಸ್ತಾರ್ ಲೋಕಸಭಾ ಕ್ಷೇತ್ರದ ಸುಕ್ಮಾ ಜಿಲ್ಲೆಯ ಕೆರ್ಲಾಪೆಡಾದ ಮತಗಟ್ಟೆಯಲ್ಲಿ "ಚುನಾವಣಾ ಬಹಿಷ್ಕಾರ" ಮಾಡುವಂತೆ ಜನರಿಗೆ ಎಚ್ಚರಿಸುವ ಬರಹ ಗೀಚಿದ್ದಾರೆ.
ಇದಕ್ಕೂ ಮೊದಲು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡುವ ಕರಪತ್ರಗಳನ್ನು ನಕ್ಸಲೀಯರು ಹಳ್ಳಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಎಸೆದಿದ್ದರು. ಆದರೆ, ಈ ಬಾರಿ ಮತಗಟ್ಟೆ ಕೇಂದ್ರದ ಗೋಡೆ ಮೇಲೆಯೇ ಬಹಿಷ್ಕರಿಸುವಂತೆ ಎಚ್ಚರಿಕೆ ಬರಹ ಬರೆಯಲಾಗಿದೆ. 'ಈ ಮತಗಟ್ಟೆಯಲ್ಲಿ ಯಾರೂ ಮತ ಹಾಕುವಂತಿಲ್ಲ. ಯಾರಿಗಾಗಿ ನಾಯಕರನ್ನು ಆಯ್ಕೆ ಮಾಡಬೇಕು? ನಾಯಕರು ಜನರನ್ನು ವಂಚಿಸುತ್ತಾರೆ' ಎಂದೆಲ್ಲಾ ಬರೆಯಲಾಗಿದೆ. ಬಿಗಿಭದ್ರತೆ ಕೈಗೊಂಡಿರುವ ನಡುವೆಯೂ ನಕ್ಸಲೀಯರು ಈ ಎಚ್ಚರಿಕೆ ನೀಡಿದ್ದು, ಭದ್ರತಾ ಪಡೆಗಳು ಮತ್ತಷ್ಟು ಅಲರ್ಟ್ ಆಗಿವೆ.
ನಾಳೆ ಮತದಾನ: ಬಸ್ತಾರ್ ಲೋಕಸಭೆ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಮತದಾನ ನಾಳೆ ನಡೆಯಲಿದೆ. ಇದು ನಕ್ಸಲೀಯರ ಉಪಟಳ ಹೆಚ್ಚಿರುವ ಪ್ರದೇಶವಾಗಿದೆ. ಹೀಗಾಗಿ ಒಂದೇ ಕ್ಷೇತ್ರಕ್ಕೆ ಮಾತ್ರ ಮೊದಲ ಹಂತದಲ್ಲಿ ಮತದಾನ ನಡೆಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ವರೆಗೆ ಮತದಾನ ನಡೆಯಲಿದೆ. ಕೆರ್ಲಾಪೆಡ ಮತಗಟ್ಟೆಯಲ್ಲಿ 791 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 446 ಮಹಿಳೆಯರು ಮತ್ತು 345 ಪುರುಷರು ಮತದಾರರಿದ್ದಾರೆ.
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಕಶ್ಯಪ್ ಮತ್ತು ಕಾಂಗ್ರೆಸ್ನಿಂದ ಕವಾಸಿ ಲಖ್ಮಾ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷದ ಹಾಲಿ ಸಂಸದರು ಇಲ್ಲಿದ್ದು, ಮತ್ತೊಮ್ಮೆ ಕ್ಷೇತ್ರ ಗೆಲ್ಲಲು ಪಕ್ಷ ಸೆಣಸುತ್ತಿದೆ. ಇತ್ತ ಬಿಜೆಪಿ ಬಸ್ತಾರ್ ಕ್ಷೇತ್ರವನ್ನು ಈ ಬಾರಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹರಸಾಹಸ ಮಾಡುತ್ತಿದೆ.
ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ 14,72,000 ಮತದಾರರಿದ್ದಾರೆ. ಇಲ್ಲಿ 1961 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಕ್ಸಲ್ಪೀಡಿತ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿಯನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: ನಾಳೆ ಮೊದಲ ಹಂತದ ಮತದಾನ: 4ನೇ ಹಂತದ ಚುನಾವಣೆಗೆ ಅಧಿಸೂಚನೆ ಪ್ರಕಟ - Election Notification Released