ದೀಗ್(ರಾಜಸ್ಥಾನ): ಒಡಿಶಾದಲ್ಲಿ ರಾಜಸ್ಥಾನದ ದೀಗ್ ಜಿಲ್ಲೆಯ ಯುವಕ ಸೇರಿದಂತೆ ನಾಲ್ವರನ್ನು ನಕ್ಸಲರು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ನಾಲ್ವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಮಾವೋವಾದಿಗಳು ಹಣ ಸುಲಿಗೆ ಮಾಡಿ ಬಿಡುಗಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇವಾತ್ ನಿವಾಸಿಯಾಗಿರುವ ಫೈಸಲ್, ನಿರ್ಮಾಣ ಕಂಪನಿಯಲ್ಲಿ ಜೆಸಿಬಿ ಚಲಾಯಿಸುತ್ತಿದ್ದಾರೆ. ಜೂನ್ 20ರಂದು ಇತರ ಮೂವರು ಸಹೋದ್ಯೋಗಿಗಳೊಂದಿಗೆ ಕಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರು ಸದಸ್ಯರ ನಕ್ಸಲ್ ಗ್ಯಾಂಗ್ ದಾಳಿ ಮಾಡಿ, ಒತ್ತೆಯಾಳಾಗಿ ಇರಿಸಿಕೊಂಡಿತ್ತು. ನಂತರ ಫೈಸಲ್ ಫೋಟೋಗಳನ್ನು ಅವರ ಕುಟುಂಬ ಸದಸ್ಯರಿಗೆ ಕಳುಹಿಸಿ 1.5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.
ಅಲ್ಲದೇ, ಪೊಲೀಸರಿಗೆ ಇದರ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಫೈಸಲ್ ಕೆಲಸ ಮಾಡುತ್ತಿದ್ದ ಕಂಪನಿಯಿಂದ ಹಣ ಸುಲಿಗೆ ಮಾಡಿದ ನಂತರ ನಕ್ಸಲರು ಅಂತಿಮವಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ವಾಧ್ವಾನಿ ಮಾಹಿತಿ ನೀಡಿ, ''ಕಂಪನಿ ಮಂಗಳವಾರ ಹಣವನ್ನು ಪಾವತಿಸಿದ ನಂತರ ನಕ್ಸಲಯರು ಮೂರು ಗಂಟೆಗಳಲ್ಲಿ ತಾವು ಒತ್ತೆಯಾಳಾಗಿ ಇರಿಸಿಕೊಂಡಿದ್ದ ನಾಲ್ವರನ್ನು ಬಿಡುಗಡೆ ಮಾಡಿದ್ದಾರೆ'' ಎಂದು ತಿಳಿಸಿದ್ದಾರೆ. ಇದೇ ವೇಳೆ, ದೀಗ್ ಎಸ್ಪಿ ರಾಜೇಶ್ ಕುಮಾರ್ ಪ್ರತಿಕ್ರಿಯಿಸಿ, ''ಈ ಬಗ್ಗೆ ಒಡಿಶಾದಿಂದ ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ'' ಎಂದು ಹೇಳಿದರು.
''ಇತರ ಪೊಲೀಸ್ ಠಾಣೆಗಳನ್ನು ಸಂಪರ್ಕಿಸುವುದರ ಹೊರತಾಗಿ, ನಾವು ಉನ್ನತ ಮಾಹಿತಿಯನ್ನೂ ತೆಗೆದುಕೊಳ್ಳುತ್ತಿದ್ದೇವೆ. ಫೈಸಲ್ ಕುಟುಂಬದಿಂದ ಇನ್ನೂ ಯಾವುದೇ ಅಧಿಕೃತವಾದ ದೂರು ದಾಖಲಾಗಿಲ್ಲ. ಒಡಿಶಾ ಪೊಲೀಸರು ಕೂಡ ಈ ವಿಷಯದಲ್ಲಿ ನಮ್ಮನ್ನು ಸಂಪರ್ಕಿಸಿಲ್ಲ'' ಎಂದು ಅವರು ಮಾಹಿತಿ ನೀಡಿದ್ದಾರೆ.
ಫೈಸಲ್ ಮತ್ತು ಕಾರ್ಮಿಕರು ಪೈಪ್‌ಲೈನ್ ಕೆಲಸ ಮಾಡುತ್ತಿದ್ದರು. ಈ ವೇಳೆ ನಕ್ಸಲರು ದಾಳಿ ನಡೆಸಿದ್ದರು. ಫೈಸಲ್ ಅವರದ್ದು ಕೃಷಿ ಕುಟುಂಬವಾಗಿದ್ದು, ಮಗನ ವಿಷಯ ತಿಳಿದು ಅಸಹಾಯಕರಾಗಿದ್ದರು. ಅಲ್ಲದೇ, ಕಂಪನಿಯ ನೆರವಿನ ಬಗ್ಗೆಯೂ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ತಮ್ಮ ಮಗನನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ತಮ್ಮ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಿಳೆಯ ಉಡುಪು, ಹಣೆಗೆ ಕುಂಕುಮ, ತುಟಿಗೆ ಲಿಪ್ಸ್ಟಿಕ್; ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿ ಶವವಾಗಿ ಪತ್ತೆ