ಸುಕ್ಮಾ, ಛತ್ತೀಸ್‌ಗಢ: ಜಿಲ್ಲೆಯ ಹಳ್ಳಿಯೊಂದರ ಮೇಲೆ ನಕ್ಸಲೀಯರು ದಾಳಿ ನಡೆಸಿ ಇಬ್ಬರನ್ನು ಕೊಂದು ಹಾಕಿದ್ದಾರೆ. ಪೊಲೀಸ್ ಮಾಹಿತಿದಾರರು ಎಂಬ ಕಾರಣಕ್ಕೆ ನಕ್ಸಲೀಯರು ಇಬ್ಬರು ಗ್ರಾಮಸ್ಥರನ್ನು ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಕ್ಸಲೀಯ ಸಂಘಟನೆಯ ಪಾಮ್ಡ್ ಏರಿಯಾ ಕಮಿಟಿ ಕೂಡ ಹತ್ಯೆಯ ಹೊಣೆ ಹೊತ್ತು ಪ್ರೆಸ್ ನೋಟ್ ಬಿಡುಗಡೆ ಮಾಡಿದೆ.
ಮೃತರಿಬ್ಬರೂ ನಕ್ಸಲ್ ಪೀಡಿತ ಗ್ರಾಮೀಣ ಪ್ರದೇಶವಾದ ದುಲ್ಲೆಡ್ ಗ್ರಾಮದ ನಿವಾಸಿಗಳು. ಮಾಹಿತಿ ಪ್ರಕಾರ ಮೃತ ಗ್ರಾಮಸ್ಥರ ಹೆಸರು ಸೋದಿ ಹಂಗ ಮತ್ತು ಮದ್ವಿ ನಂದಾ. ನಕ್ಸಲೀಯರು ಗ್ರಾಮಸ್ಥರನ್ನು ಅವರ ಮನೆಯಿಂದ ಅಪಹರಿಸಿ ಸ್ವಲ್ಪ ದೂರಕ್ಕೆ ಕರೆದೊಯ್ದು ಹರಿತವಾದ ಆಯುಧದಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಚಿಂತಗುಫಾ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಎರಡೂ ಗ್ರಾಮಸ್ಥರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸ್ಥಳದಿಂದ ನಕ್ಸಲೀಯ ಕರಪತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಗ್ರಾಮಸ್ಥರಿಬ್ಬರೂ ಪೊಲೀಸರಿಗೆ ಮಾಹಿತಿದಾರರು ಎಂದು ನಕ್ಸಲೀಯರು ಆರೋಪಿಸಿದ್ದಾರೆ.
ಇದಲ್ಲದೇ ಅದೇ ಗ್ರಾಮದ ನಿವಾಸಿಗಳಾದ ಪದ್ಮಾ (ಪಾಂಗಲ್ ದೇಂಗಲ್) ಮತ್ತು ದೇವೆ ಎಂಬುವವರನ್ನು ಪೊಲೀಸ್ ಮಾಹಿತಿದಾರರೆಂದು ಆರೋಪಿಸಿ ನಕ್ಸಲೀಯರು ಈ ಕೆಲಸ ಬಿಟ್ಟು ಸಹಜ ಜೀವನ ನಡೆಸುವಂತೆ ಎಚ್ಚರಿಕೆ ನೀಡಿದ್ದಾರೆ. ಘಟನೆ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸುಕ್ಮಾ ಜಿಲ್ಲೆಯ ಚಿಂತಗುಫಾ ಪೊಲೀಸ್ ಠಾಣೆ ವ್ಯಾಪ್ತಿಯ ದುಲ್ಲೆಡ್ ಗ್ರಾಮದಲ್ಲಿ ಇಬ್ಬರು ಗ್ರಾಮಸ್ಥರನ್ನು ಹತ್ಯೆ ಮಾಡಲಾಗಿದೆ. ಇಬ್ಬರೂ ಗ್ರಾಮಸ್ಥರು ಕಹೇರ್ ದುಲ್ಲೆಡ್ ಗ್ರಾಮದ ನಿವಾಸಿಗಳು. ಹತ್ಯೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಯೋಧರನ್ನು ರವಾನಿಸಲಾಯಿತು. ಯೋಧರು ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಸುಕ್ಮಾ ಎಸ್ಪಿ ಕಿರಣ್ ಚವ್ಹಾಣ್ ಮಾಹಿತಿ ನೀಡಿದರು.
ಗ್ರಾಮದ ಸುತ್ತಮುತ್ತ ಮುಂದುವರಿದ ಶೋಧ ಕಾರ್ಯಾಚರಣೆ : ದುಲ್ಲೆಡ್ ಗ್ರಾಮದ ಸುತ್ತಮುತ್ತ ಶೋಧ ಕಾರ್ಯ ನಡೆಯುತ್ತಿದೆ ಎಂದು ಸುಕ್ಮಾ ಎಸ್ಪಿ ಕಿರಣ್ ಚವ್ಹಾಣ್ ತಿಳಿಸಿದ್ದಾರೆ. ಸರ್ಕಾರದ ಜನಕಲ್ಯಾಣ ಯೋಜನೆಗಳು ಸಾಮಾನ್ಯ ನಾಗರಿಕರಿಗೆ ತಲುಪಲು ನಕ್ಸಲ್ ಸಂಘಟನೆಗಳು ಬಯಸುವುದಿಲ್ಲ. ನಕ್ಸಲೀಯರ ಬೆಂಬಲದ ನೆಲೆ ಕಣ್ಮರೆಯಾಗುತ್ತಿದೆ. ಇದೇ ಕಾರಣಕ್ಕೆ ನಕ್ಸಲೀಯರು ಸಾಮಾನ್ಯ ನಾಗರಿಕರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ.