ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ಸುಪ್ರೀಂಕೋರ್ಟ್‌ಗೆ ಭಾವನಾತ್ಮಕ ವಿದಾಯ ಹೇಳಿದರು. ನ. 9, 2022 ರಂದು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, ತಮ್ಮ 2 ವರ್ಷಗಳ ಅವಧಿ ಮುಗಿದ ನಂತರ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದರು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಚಂದ್ರಚೂಡ್ ಅವರು ಕೆಲವು ಘಟನಾವಳಿಗಳನ್ನು ಸ್ಮರಿಸುತ್ತಾ, ''ತಮ್ಮ ಭುಜಗಳು ಟೀಕೆಗಳನ್ನು ಸ್ವೀಕರಿಸುವಷ್ಟು ವಿಶಾಲವಾಗಿವೆ. ತಮ್ಮನ್ನು ಟ್ರೋಲ್ ಮಾಡಿದವರೆಲ್ಲರೂ ಶೀಘ್ರದಲ್ಲೇ ನಿರುದ್ಯೋಗಿಗಳಾಗುತ್ತಾರೆ'' ಎಂದು ಟೀಕಿಸಿದರು.
''ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ. ಹಾಗೆಯೇ ನನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಜ್ಞಾನಕ್ಕೆ ನಾನು ಅನೇಕ ರೀತಿಯಲ್ಲಿ ತೆರೆದಿಟ್ಟಿದ್ದೇನೆ. ನಿಮ್ಮ ಸ್ವಂತ ಜೀವನವನ್ನು ನೀವು ಸಾರ್ವಜನಿಕ ಜ್ಞಾನಕ್ಕೆ ತೆರೆದಿಟ್ಟಾಗ ಹಲವು ರೀತಿಯಲ್ಲಿ ಟೀಕೆಗೆ ಗುರಿಯಾಗುತ್ತೀರಿ. ವಿಶೇಷವಾಗಿ ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ. ಬಹುಶಃ ಹೆಚ್ಚು ಟ್ರೋಲ್ ಮಾಡಲ್ಪಟ್ಟ ನ್ಯಾಯಾಧೀಶ ನಾನಾಗಿರಬಹು. ನಾನು ಎದುರಿಸಿದ ಎಲ್ಲಾ ಟೀಕೆಗಳನ್ನು ಸ್ವೀಕರಿಸುವಷ್ಟು ನನ್ನ ಭುಜಗಳು ವಿಶಾಲವಾಗಿವೆ'' ಎಂದು ಅವರು ಹೇಳಿದರು.
ತಮ್ಮ ನ್ಯಾಯಾಂಗ ಪ್ರಯಾಣದ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡ ಅವರು, ''ಇನ್ನು ನನಗೆ ನ್ಯಾಯ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ನಿವೃತ್ತಿಯಿಂದ ನಾನು ತೃಪ್ತಿ ಹೊಂದಿದ್ದೇನೆ. ನ್ಯಾಯಾಂಗ ಸುಧಾರಣೆ ಪಾರದರ್ಶಕತೆ ಮತ್ತು ನ್ಯಾಯಕ್ಕೆ ಅಚಲವಾದ ಬದ್ಧತೆಯೊಂದಿಗೆ ಸಂಯೋಜಿಸಿದ್ದೇನೆ'' ಎಂದು ತಮ್ಮ ಅಧಿಕಾರಾವಧಿ ಬಗ್ಗೆ ತಿಳಿಸಿದರು.
ನ್ಯಾಯಾಂಗದಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ನಿರ್ಗಮಿತ ಮುಖ್ಯ ನ್ಯಾಯಮೂರ್ತಿಗಳು, ''ನೀವು ನ್ಯಾಯಾಧೀಶರಾದಾಗ, ನಿಮ್ಮ ಭಯವನ್ನು ನೀವು ಮೊದಲು ಎದುರಿಸುತ್ತೀರಿ. ನಿಮ್ಮ ಸ್ವಂತ ಮಿತಿಗಳನ್ನು ಮತ್ತು ನಿಮಗೆ ಶಿಕ್ಷಣ ನೀಡುವಲ್ಲಿ ಬಾರ್‌ನ ಪ್ರಾಮುಖ್ಯತೆಯನ್ನು ನೀವು ಕಲಿಯುತ್ತೀರಿ'' ಎಂದು ಅನುಭವದ ಮಾತು ಪ್ರಸ್ತಾಪಿಸಿದರು.
ಇದೇ ವೇಳೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ತಮ್ಮ ಸೇವಾ ದಿನಗಳನ್ನು ನೆನಪಿಸಿಕೊಂಡ ಅವರು, ಅಲ್ಲಿ ಪ್ರತಿ ದಿನ ಬೆಳಗ್ಗೆ ನ್ಯಾಯಾಧೀಶರ ಆಲ್ಬಮ್ ನೋಡುತ್ತಿದ್ದರ ಬಗ್ಗೆ, ತಾವು ಅಲಹಾಬಾದ್‌ನಲ್ಲಿ ಮುಖ್ಯಸ್ಥರಾದ ಬಗ್ಗೆ, ಅಲ್ಲಿ ಕಲಿತ ಹತ್ತು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಾ ನಗು ಮುಖದಲ್ಲೇ ಭಾವನಾತ್ಮಕ ವಿದಾಯ ಹೇಳಿದರು.
''ನಾನು ನ್ಯಾಯಾಲಯದಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿಮ್ಮೆಲ್ಲರಿಗೂ ಧನ್ಯವಾದ ಹೇಳುವ ಮೂಲಕ ನಾನು ಸೇವಾವಧಿ ಮುಗಿಸುತ್ತೇನೆ. ನಾನು ಇಂದು ಜೀವನದ ಬಗ್ಗೆ ತುಂಬಾ ಕಲಿತಿದ್ದೇನೆ. ನೀವೆಲ್ಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು'' ಎಂದು ಹೇಳಿದರು. ಅಲ್ಲದೇ ಅಧಿಕಾರಾವಧಿಯಲ್ಲಿ ತಮಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸೆರಿಮೋನಿಯಲ್ ಬೆಂಚ್‌ನ ಆನ್‌ಲೈನ್ ಸ್ಟ್ರೀಮಿಂಗ್‌ನಲ್ಲಿ, ಹಿರಿಯ ವಕೀಲ ಮತ್ತು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಘ್ವಿ ಸೇರಿದಂತೆ ವಕೀಲರು ನಿರ್ಗಮಿತ ನ್ಯಾ. ಚಂದ್ರಚೂಡ್ ಅವರನ್ನು ಉದ್ದೇಶಿಸಿ ಮತ್ತು ನ್ಯಾಯಾಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಚಂದ್ರಚೂಡ್ ಅವರು ದೇಶದ ಶ್ರೇಷ್ಠ ನ್ಯಾಯಾಧೀಶರಲ್ಲಿ ಒಬ್ಬರೆಂದು ಕಪಿಲ್ ಸಿಬಲ್ ಅವರು ನಿರ್ಗಮಿತ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಕೊಂಡಾಡಿದರು.
ಪೀಠದಲ್ಲಿ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಜೆ. ಬಿ. ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಇದ್ದರು.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ನೇಮಕ